ಬಿಜೆಪಿ ಕಡೆಗೆ ಒಲವು ತೋರಿಸಿದ್ರಾ ದುಶ್ಯಂತ್ ಚೌಟಾಲಾ?

– ಕಾಂಗ್ರೆಸ್‍ನಿಂದ ಜೆಜೆಪಿಗೆ ಸಿಎಂ ಆಫರ್

ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜನನಾಯಕ ಜನತಾ ಪಕ್ಷ (ಜೆಜೆಪಿ)ಯು ರಾಷ್ಟ್ರೀಯ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭರ್ಜರಿ ಪೈಪೋಟಿ ಕೊಟ್ಟಿದೆ. ಈ ಬೆನ್ನಲ್ಲೇ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿ ಆಫರ್ ನೀಡಿದೆ.

ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ರಚನೆಗೆ ಜೆಜೆಪಿ ಅಗತ್ಯ ಎನ್ನುವಂತಹ ವಾತಾವರಣ ಹರ್ಯಾಣದಲ್ಲಿ ನಿರ್ಮಾಣವಾಗಿದೆ. ಜೆಜೆಪಿ ಪಕ್ಷ ಸ್ಥಾಪನೆಯಾಗಿ ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ. ಆದರೂ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸದ್ದು ಮಾಡಿದೆ.

ಹರ್ಯಾಣದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ನಿರ್ಧಾರ ಕೈಗೊಳ್ಳುವ ವಿಶೇಷ ಸಾಮಥ್ರ್ಯವನ್ನು ಜೆಜೆಪಿ ಗಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿಯು ಜೆಜೆಪಿ ನಾಯಕ ದುಶ್ಯಂತ್ ಸಿಂಗ್ ಚೌಟಾಲಾ ಅವರ ಪಕ್ಷದ ಬಾಗಿಲು ತಟ್ಟಿದೆ.

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ದುಶ್ಯಂತ್ ಸಿಂಗ್ ಚೌಟಾಲಾ ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದುಶ್ಯಂತ್ ಚೌಟಾಲಾ, ಪಕ್ಷದ ಪ್ರತಿಯೊಬ್ಬ ಮುಖಂಡರು, ಆಯ್ಕೆಯಾದ ಅಭ್ಯರ್ಥಿಗಳ ಜೊತೆಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದ ಅಭಿವೃದ್ಧಿಯೇ ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಕಾಂಗ್ರೆಸ್ ದುಶ್ಯಂತ್ ಚೌಟಾಲಾ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಹರ್ಯಾಣ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಅಶೋಕ್ ಅನ್ವಾರ್, ರಾಜ್ಯದ ಜನರು ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ದುಶ್ಯಂತ್ ಚೌಟಾಲಾ ಅವರೇ ಮುಂದಿನ ಮುಖ್ಯಮಂತ್ರಿ. ಇದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *