ಪರಿಹಾರ ಕೆಂದ್ರದಲ್ಲಿ ಮಗುವಿನ ನಾಮಕರಣ- ಹರ್ಷಿಕಾ, ಭುವನ್ ಭಾಗಿ

– ತೊಟ್ಟಿಲು ಗಿಫ್ಟ್

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಮಗುವಿನ ನಾಮಕರಣ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಇಬ್ಬರು ಭಾಗಿಯಾಗಿದ್ದರು.

ಅಧಿಕ ಮಳೆಯಿಂದಾಗಿ ಜಿಲ್ಲೆಯ ಗೋಕಾಕ್‍ನಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಪ್ರವಾಹದಿಂದ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡ ಜನರು ಸದ್ಯಕ್ಕೆ ಗೋಕಾಕ್ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದೇ ಪರಿಹಾರ ಕೇಂದ್ರದಲ್ಲಿ ನಡೆಯುತ್ತಿದ್ದ ಮಗುವಿನ ನಾಮಕರಣದಲ್ಲಿ ನಟ ಭುವನ್ ಮತ್ತು ಹರ್ಷಿಕಾ ಭಾಗಿಯಾಗಿದ್ದರು. ಇದನ್ನೂ ಓದಿ: ಮಗುವಿಗೆ ಹತ್ತು ದಿನಗಳಾದ್ರೂ ಸ್ನಾನ ಮಾಡಿಸಿಲ್ಲ: ಬಾಣಂತಿಯ ಕಣ್ಣೀರು

ಮಗುವಿನ ನಾಮಕರಣಕ್ಕೆ ಅವರೇ ತೊಟ್ಟಿಲನ್ನು ತೆಗೆದುಕೊಂಡು ಹೋಗಿ ನೀಡಿದ್ದಾರೆ. ಮಗುವನ್ನು ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಅಳು ನಿಲ್ಲಿಸಲು ಭುವನ್ ಮತ್ತು ಹರ್ಷಿಕಾ ಇಬ್ಬರು ಪ್ರಯತ್ನ ಮಾಡಿದ್ದಾರೆ. ನಾಮಕರಣದ ವಿಡಿಯೋವನ್ನು ಹರ್ಷಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

“ಗೋಕಾಕ್‍ನಲ್ಲಿ ಪ್ರವಾಹದಿಂದ ಸಂತ್ರಸ್ತರು ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೂ ಈ ಪುಟ್ಟ ರಾಜಕುಮಾರಿ ತನ್ನ ನಗುವನ್ನು ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ. ನಾವು ಖರೀದಿಸಿ ಕೊಟ್ಟಿರುವ ತೊಟ್ಟಿಲು ಆಕೆಗೆ ಇಷ್ಟವಾಗಿದೆ. ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ, ಅದು ನಿಜ” ಎಂದು ಬರೆದು ಹರ್ಷಿಕಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಾಮಾನ್ಯ ಜನರು ಸೇರಿದಂತೆ ನಟ-ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಳೆದ ದಿನವಷ್ಟೆ ಭುವನ್ ಅಭಿನಯದ ‘ರಾಂಧವ’ ಚಿತ್ರತಂಡ ಭುವನ್ ನೇತೃತ್ವದಲ್ಲಿ ಚಿಕ್ಕೋಡಿ, ಗೋಕಾಕ್ ಸೇರಿದಂತೆ ಕೆಲವು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದು, ಅಲ್ಲಿನ ಜನರಿಗೆ ಅಗತ್ಯವಿರುವ ಕೆಲ ವಸ್ತುಗಳನ್ನು ಸಾಗಿಸುತ್ತಿದ್ದಾರೆ.

https://www.instagram.com/p/B1Ig1H0Hj2G/

Comments

Leave a Reply

Your email address will not be published. Required fields are marked *