ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

ಶಿವಮೊಗ್ಗ: ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆಗೂ ಕೆಲ ಗಂಟೆಗಳ ಮೊದಲು ಇಬ್ಬರೂ ಹುಡುಗಿಯರು ವೀಡಿಯೋ ಕಾಲ್ ಮಾಡಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ತನಿಖೆ ಆರಂಭಗೊಂಡಿದ್ದು ಆರೋಪಿಗಳ ಇತಿಹಾಸ ಪತ್ತೆಯಾಗುತ್ತಿದ್ದಂತೆ ಈಗ ಕೊನೆ ಕ್ಷಣದ ಮಾಹಿತಿಗಳು ಲಭ್ಯವಾಗುತ್ತಿದೆ. ಹತ್ಯೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ಸಹಾಯಕ್ಕಾಗಿ ಹರ್ಷಗೆ ವೀಡಿಯೋ ಕಾಲ್ ಮಾಡಿದ್ದ ವಿಚಾರವನ್ನು ಹರ್ಷನ ಸ್ನೇಹಿತ ನವೀನ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

ಸ್ನೇಹಿತ ಹೇಳಿದ್ದು ಏನು?
ಹರ್ಷ ಕೊಲೆಯಾಗುವ ಮೊದಲು ಸಹಾಯ ಕೇಳುವ ನೆಪದಲ್ಲಿ 2 ಹುಡುಗಿಯರು ಪದೇ ಪದೇ ವೀಡಿಯೋ ಕಾಲ್ ಮಾಡಿದ್ದರು. ಈ ವೇಳೆ ಹರ್ಷನ ಜೊತೆ ನಾವು ನಾಲ್ಕು ಜನ ಇದ್ದೆವು. ಹರ್ಷನಿಗೆ ಪದೇ ಪದೇ ಕಾಲ್ ಬರುತ್ತಿದ್ದಂತೆ ಹರ್ಷ ಕಾಲ್ ಕಟ್ ಮಾಡುತ್ತಿದ್ದ. ಆದರೆ ಅವರು ಮತ್ತೆ, ಮತ್ತೆ ನಾನು ನಿನ್ನ ಸ್ನೇಹಿತೆ ಸಹಾಯಕ್ಕಾಗಿ ಫೋನ್ ಮಾಡುತ್ತಿದ್ದೇವೆ ಎಂದು ಕಾಲ್ ಮಾಡುತ್ತಿದ್ದರು. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

ಬಳಿಕ 4 ಜನ ಜೊತೆಗೆ ಹೊರಟಾಗ ಹರ್ಷ ಬೈಕ್ ಬೇಡ ನಡೆದುಕೊಂಡು ಹೋಗೋಣ ಎಂದ, ನಡೆದು ಕೊಂಡು ಹೋಗುತ್ತಿದ್ದೆವು. ಅಮ್ಮ ಕ್ಯಾಂಟೀನ್ ಬಳಿ ಬರುತ್ತಿದ್ದಂತೆ ಹರ್ಷ ನಡೆದುಕೊಂಡು ಹೋಗುವುದು ಬೇಡ ಬೈಕ್ ತನ್ನಿ ಎಂದು ನಮ್ಮನ್ನು ಕಳುಹಿಸಿದ ಬಳಿಕ ಘಟನೆ ನಡೆದಿದೆ. ನಾವು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಖಾಸೀಫ್ ಬಾಟಲ್ ಹಿಡಿದುಕೊಂಡು ಓಡಿ ಹೋಗುತ್ತಿದ್ದ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹತ್ಯೆಯ ದಿನ ರಾತ್ರಿ 10 ಗಂಟೆಯ ವರೆಗೆ ಜೊತೆಗೆ ಇದ್ದೆವು. 2 ವಾರದಿಂದ ಹರ್ಷನನ್ನು ಆರೋಪಿಗಳು ಫಾಲೋ ಮಾಡಿದ್ದರು. ತನ್ನನ್ನು ಫಾಲೋ ಮಾಡುತ್ತಿರುವ ಬಗ್ಗೆ ಹರ್ಷನಿಗೂ ಅನುಮಾನವಿತ್ತು. ಎಂದು ತಿಳಿಸಿದ್ದಾರೆ. ದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

ಕರೆ ಮಾಡಿದ ಹುಡುಗಿಯರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಹತ್ಯೆಗೆ ಸಹಕಾರ ಮಾಡಲೆಂದೇ ಇಬ್ಬರು ಹುಡುಗಿಯರು ಕರೆ ಮಾಡಿದ್ದಾರಾ? ಅಥವಾ ನಿಜವಾಗಿಯೂ ಸಹಾಯ ಕೇಳಿ ಕರೆ ಮಾಡಿದ್ದಾರಾ ಎಂಬುದು ಮುಂದಿನ ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

ಕೊಲೆಯಾಗುವ ವೇಳೆ ಮೊಬೈಲ್ ಹರ್ಷ ಬಳಿಯೇ ಇತ್ತು. ಆದರೆ ಕೊಲೆಯಾದ ಬಳಿಕ ಮೊಬೈಲ್ ನಾಪತ್ತೆಯಾಗಿದೆ. ಈಗ ಆ ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

Comments

Leave a Reply

Your email address will not be published. Required fields are marked *