ಇಂಡೋ-ಪಾಕ್ ಕೇವಲ ಪಂದ್ಯವಲ್ಲ, ಭಾವನೆ, ನಿರೀಕ್ಷೆಗಳ ಸೆಣಸಾಟ: ಪಾಂಡ್ಯ

ನವದೆಹಲಿ: ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮ್ಯಾಂಚೆಸ್ಟರ್‍ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಭಾರತದ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಕೆಲವು ನಾಯಕರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಈ ಕುರಿತ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಸಂಜಯ್ ಮಂಜ್ರೇಕರ್ ಮನದಾಳದ ಮಾತನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜನ ಇದನ್ನು ಒಂದು ಆಟವನ್ನಾಗಿ ಮಾತ್ರ ನೋಡುತ್ತಾರೆ. ಆದರೆ ನಾನು ಇದನ್ನು ಒಂದು ಆಟವನ್ನಾಗಿ ಮಾತ್ರ ನೋಡುವುದಿಲ್ಲ. ಇದು ಒಂದು ಸವಾಲು. ಅಲ್ಲದೆ, ಭಾವನೆಗಳು, ನೀರೀಕ್ಷೆಗಳು ಸೇರಿದಂತೆ ಎಲ್ಲವೂ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಅಡಗಿದೆ ಎಂದು ಹಾರ್ದಿಕ್ ಪಾಂಡ್ಯ ವಿಡಿಯೋದಲ್ಲಿ ಹೇಳಿದ್ದಾರೆ.

ಈ ಕುತೂಹಲಕಾರಿ ಪಂದ್ಯ ವೀಕ್ಷಿಸಲು ಒಂದು ಆಸನ ಮಾತ್ರವಲ್ಲ, ಒಂದು ಇಂಚು ಕೂಡ ಜಾಗ ಇರದಷ್ಟು ಕ್ರಿಕೆಟ್ ಅಭಿಮಾನಿಗಳು ಆಗಮಿಸುತ್ತಾರೆ. ನಾನು ಆಟ ಆಡುವ ಮೂಲಕ ಪಂದ್ಯವನ್ನು ಆನಂದಿಸುತ್ತೇನೆ ಎಂದು ವಿಡಿಯೊದಲ್ಲಿ ಪಾಂಡ್ಯ ಹೇಳಿದ್ದಾರೆ.

ಭಾರತ-ಪಾಕಿಸ್ತಾನದ ಪಂದ್ಯದ ಕುರಿತು ರವೀಂದ್ರ ಜಡೇಜಾ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಭಾರತ-ಪಾಕಿಸ್ತಾನದ ಎಲ್ಲ ಪಂದ್ಯಗಳು ಹೆಚ್ಚು ತೀವ್ರತೆಯಿಂದ ಕೂಡಿರುತ್ತವೆ. ಇದು ಕೇವಲ ಗೆಲುವು ಸೋಲಿನ ಪ್ರಶ್ನೆಯಲ್ಲ, ಇವುಗಳನ್ನು ಮೀರಿದ ಭಾವನೆ. ಪಾಕಿಸ್ತಾನದ ವಿರುದ್ಧ ಆಟವಾಡುವಾಗ ಒತ್ತಡ ತುಂಬಾ ಹೆಚ್ಚಿರುತ್ತದೆ. ಜನರಿಗೆ ಏನಾಗಿದೆ ಎಂಬುದು ಬೇಕಿಲ್ಲ ಆದರೆ ಪಾಕಿಸ್ತಾನದ ವಿರುದ್ಧ ಗೆಲ್ಲಬೇಕಷ್ಟೆ. ಹೀಗಾಗಿ ಒತ್ತಡ ಹೆಚ್ಚಿರುತ್ತದೆ ಎಂದು ಐಸಿಸಿ ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟಾಸ್ ಗೆದ್ದಿರುವ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಟೀ ಇಂಡಿಯಾ ಬ್ಯಾಟಿಂಗ್ ನಡೆಸಲಿದೆ. ಟೀಂ ಇಂಡಿಯಾ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೀಪರ್ ಎಂ.ಎಸ್.ಧೋನಿ, ಕೆ.ಎಲ್.ರಾಹುಲ್, ವಿಜಯ್ ಶಂಕರ್, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಬೌಲರ್ ಗಳಾದ ಜಸ್ಪ್ರೀತ್ ಬುರ್ಮಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್ ತಂಡದಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಸ್ಥಾನವನ್ನು ಅನುಭವಿ ಆಟಗಾರ ಕೆ.ಎಲ್.ರಾಹುಲ್ ತುಂಬುತ್ತಿದ್ದಾರೆ. ಇತ್ತ ವಿಜಯ್ ಶಂಕರ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ.

Comments

Leave a Reply

Your email address will not be published. Required fields are marked *