ಕಾಫಿ ವಿಥ್ ಕರಣ್ ಶೋ ವಿವಾದ – ಭಾರೀ ದಂಡ ತೆತ್ತ ಕೆಎಲ್ ರಾಹುಲ್, ಪಾಂಡ್ಯ

ಮುಂಬೈ: ‘ಕಾಫಿ ವಿಥ್ ಕರಣ್’ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ, ಮಹಿಳೆಯರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಂಬಂಧಿದಂತೆ ಬಿಸಿಸಿಐ ಸುಪ್ರಿಂ ಕೋರ್ಟ್ ನೇಮಿಸಿದ ನ್ಯಾ. ಡಿಕೆ ಜೈನ್ ವಿಶೇಷ ರೀತಿಯಲ್ಲಿ ದಂಡ ವಿಧಿಸಿದ್ದಾರೆ.

ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ಏಪ್ರಿಲ್ 9 ಮತ್ತು 10 ರಂದು ರಾಹುಲ್, ಪಾಂಡ್ಯ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದರು. ಇಬ್ಬರ ಹೇಳಿಕೆಗಳು ನಿಯಮ 41 (1) ಸಿ ಅನ್ವಯ ಉಲ್ಲಂಘನೆ ಆಗಿದ್ದು, ಇಬ್ಬರಿಗೂ ತಲಾ 20 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಲಾಗಿದ್ದು, ಈ ಮೊತ್ತದಲ್ಲಿ 10 ಲಕ್ಷ ರೂ.ಗಳನ್ನು ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ರೂ.ಗಳನ್ನು ನೀಡುವಂತೆ ತಿಳಿಸಿದೆ. ಉಳಿದ ಹಣ ಸಮಿತಿ ರಚಿಸಿರುವ ಅಂಧರ ಕ್ರಿಕೆಟ್ ಸಂಸ್ಥೆಗೆ ದಾನ ನೀಡಲು ತಿಳಿಸಿದೆ. ಅಲ್ಲದೇ 4 ವಾರಗಳ ಒಳಗೆ ದಂಡ ಪಾವತಿ ಮಾಡಬೇಕೆಂದು ಸೂಚನೆ ನೀಡಲಾಗಿದೆ.

ಒಂದೊಮ್ಮೆ ನಿಗದಿತ ಸಮಯದೊಳಗೆ ಆಟಗಾರರು ಹಣ ನೀಡಲು ವಿಫಲವಾದಲ್ಲಿ ಈ ಮೊತ್ತವನ್ನು ಬಿಸಿಸಿಐ ಅವರ ಪಂದ್ಯದ ಶುಲ್ಕದಲ್ಲಿ ಕಡಿತಗೊಳಿಸುವಂತೆ ತಿಳಿಸಲಾಗಿದೆ. ಆಟಗಾರರು ಈಗಾಗಲೇ ಬಿಸಿಸಿಐ ನಿಷೇಧ ಮಾಡಿ ಆಸ್ಟ್ರೇಲಿಯಾ ಟೂರ್ನಿಯಿಂದ ಹಿಂದಿರುಗಿದ ಪರಿಣಾಮ ಸುಮಾರು 30 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ವಿಚಾರಣೆ ವೇಳೆ ಪರಿಗಣಿಸಲಾಗಿದೆ. ದೇಶದಲ್ಲಿ ಕ್ರೀಡಾಪಟುಗಳನ್ನು ರೋಲ್ ಮಾಡೆಲ್ ಗಳಾಗಿ ಪರಿಗಣಿಸಲಾಗುತ್ತದೆ. ಅವರ ಘನತೆಗೆ ತಕ್ಕಂತೆ ಅವರು ವರ್ತಿಸುವುದು ಅಗತ್ಯವಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.

ಆಟಗಾರರಿಗೆ ದಂಡ ವಿಧಿಸುವ ಮೂಲಕ ಈ ವಿಚಾರವನ್ನು ಅಂತಿಮಗೊಳಿಸಲಾಗಿದ್ದು, ನಿಷೇಧ ತೂಗುಗತ್ತಿಯಿಂದ ಇಬ್ಬರು ಆಟಗಾರರು ಪಾರಾಗಿದ್ದಾರೆ ಎನ್ನಬಹುದು. ಸದ್ಯ ಇಬ್ಬರು ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗಿರುವುದರಿಂದ ಪ್ರದರ್ಶನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.

ರಾಹುಲ್, ಪಾಂಡ್ಯ ಹೇಳಿದ್ದೇನು?
ಬಾಲಿವುಡ್‍ನ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಜನವರಿಯಲ್ಲಿ ಪ್ರಸಾರಗೊಂಡಿತ್ತು. ಈ ವೇಳೆ ಕೇಳಿದ ಪ್ರಶ್ನೆಗಳಿಗೆ ಮನಸ್ಸಿಗೆ ಬಂದಂತೆ ಹಿಂದೆ ಮುಂದೆ ನೋಡದ ಇಬ್ಬರು ಆಟಗಾರರು ಉತ್ತರಿಸಿದ್ದರು. ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಾರ್ದಿಕ್ ಹಾಗೂ ಕೆಎಲ್ ರಾಹುಲ್ ಹಿಂದು ಮುಂದು ನೋಡದೇ ಕೊಹ್ಲಿ ಎಂದಿದ್ದರು. ಅಲ್ಲದೇ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಬಗ್ಗೆ ಕೇಳಿದ ಪ್ರಶ್ನೆಯ ಬಗ್ಗೆ ಕ್ಷಣ ಕಾಲ ಕೂಡ ಯೋಚಿಸದೇ ಹಾರ್ದಿಕ್ ಉತ್ತರಿಸಿದ್ದರು.

ಕಾರ್ಯಕ್ರಮದ ಸಂಭಾಷಣೆಯ ವೇಳೆಯಲ್ಲಿ ಹಾರ್ದಿಕ್ ಮಹಿಳೆಯರ ಬಗ್ಗೆ ಸ್ತ್ರೀ ದ್ವೇಷಿ ಹಾಗೂ ಕಾಮಪ್ರಚೋದಕ ಹೇಳಿಕೆಯನ್ನು ನೀಡಿದ್ದರು. ಅನೇಕ ಹೆಣ್ಮಕ್ಕಳ ಸಂಗವನ್ನು ತಾವು ಇಷ್ಟಪಡುವುದಾಗಿ ಈ ಬಗ್ಗೆ ಹೆಮ್ಮೆಪಟ್ಟುಕೊಂಡು ಹೆತ್ತವರಲ್ಲಿ ಮುಕ್ತವಾಗಿ ಮಾತನಾಡುವುದಾಗಿ ತಿಳಿಸಿದ್ದರು. ಅಲ್ಲದೇ ಹೆಣ್ಣು ಮಕ್ಕಳ ಬಗ್ಗೆ ಪಾಂಡ್ಯ ಪದ ಬಳಕೆ ಎಷ್ಟು ಕೀಳು ಮಟ್ಟದಲ್ಲಿತ್ತೆಂದರೆ ಮೊದಲ ಬಾರಿ ಅನುಭವದ ಬಳಿಕ ನೇರವಾಗಿ ಹೆತ್ತವರ ಬಳಿ ಬಂದು ‘ಆಜ್ ಮೇ ಕರ್ ಕೇ ಆಯಾ’ (ಇವತ್ತು ನಾನು ಮಾಡಿ ಬಂದೆ) ಎಂದು ಹೇಳಿಕೊಂಡಿದ್ದಾಗಿ ತಿಳಿಸಿದ್ದರು. ಕ್ಲಬ್‍ನಲ್ಲಿ ಮಹಿಳೆಯ ಹೆಸರು ಯಾಕೆ ಕೇಳಿಲ್ಲ ಎಂಬುದಕ್ಕೆ ಉತ್ತರವಾಗಿ, ಮಹಿಳೆಯ ನಡಿಗೆಯನ್ನು ನಾನು ವೀಕ್ಷಿಸಲು ಬಯಸುತ್ತೇನೆ ಎಂದು ಉತ್ತರಿಸಿದ್ದರು.

Comments

Leave a Reply

Your email address will not be published. Required fields are marked *