37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

-3 ತಿಂಗಳಿನಲ್ಲಿ 7ಕೆಜಿ ತೂಕ ಹೆಚ್ಚಿಸಿಕೊಂಡು ಸಂಪೂರ್ಣ ಫಿಟ್

ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಮೂರು ತಿಂಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದರು. ಸದ್ಯ ಚೇತರಿಸಿಕೊಂಡು ದೇಶೀಯ ಕ್ರಿಕೆಟ್ ಆಡುತ್ತಿರುವ ಪಾಂಡ್ಯ ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ದೇಶೀಯ ಡಿವೈ ಪಾಟಿಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಹಾರ್ದಿಕ್ ಪಾಂಡ್ಯ 39 ಎಸೆತಗಳಲ್ಲಿ 7 ಬೌಂಡರಿ, 10 ಸಿಕ್ಸರ್ ಗಳೊಂದಿಗೆ 105 ರನ್ ಸಿಡಿಸಿದ್ದಾರೆ. ಸಿಎಜಿ ತಂಡದ ವಂದಿತ್ ಜೀವರಾಜನಿ ಎಸೆದ ಇನ್ನಿಂಗ್ಸ್ ನ 15ನೇ ಓವರಿನಲ್ಲಿ ಹಾರ್ದಿಕ್ 3 ಸಿಕ್ಸರ್, 2 ಬೌಂಡರಿಗಳೊಂದಿಗೆ 26 ರನ್ ಗಳಿಸಿದ್ದು ಗಮನಾರ್ಹವಾಗಿತ್ತು. ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ಗಮನ ಸೆಳೆದ ಹಾರ್ದಿಕ್ ಪಾಂಡ್ಯ ಆ ಮೂಲಕ ತಾನು ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಸಿದ್ಧ ಎಂಬ ಸಂದೇಶವನ್ನು ರವಾಸಿದ್ದಾರೆ.

ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಿಲಯನ್ಸ್ 1 ತಂಡದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಇತ್ತ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಬ್ಬ ಸ್ಟಾರ್ ಆಟಗಾರ ಧವನ್ ಮತ್ತೊಮ್ಮೆ ಬ್ಯಾಟಿಂಗ್‍ನಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹಾರ್ದಿಕ್ 25 ಎಸೆತಗಳಲ್ಲಿ 38 ರನ್ ಗಳಿಸಿದ್ದರು.  ಇದೇ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಭುವನೇಶ್ವರ್, ಶಿಖರ್ ಧವನ್ ಕೂಡ ಮೈದಾನಕ್ಕಿಳಿದಿದ್ದರು.

ಟೀಂ ಇಂಡಿಯಾ ಪರ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ಆಡಿದ್ದ ಹಾರ್ದಿಕ್ ಪಾಂಡ್ಯ ಆ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ರಾಂತಿ ಸಮಯದಲ್ಲಿ ಹಾರ್ದಿಕ್ ತಮ್ಮ ದೇಹದ ತೂಕ ಕಳೆದುಕೊಂಡಿದ್ದರು. ಆದರೆ ಮತ್ತೆ ತೂಕವನ್ನು ಹೆಚ್ಚಿಸಿಕೊಂಡಿರುವ ಹಾರ್ದಿಕ್, ತಮ್ಮ ಫಿಟ್ನೆಸ್ ಜರ್ನಿಯ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿ ಮಾಹಿತಿ ನೀಡಿದ್ದಾರೆ. ಮಾ.12 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲಿದ್ದು, ಈ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್ ಮಾಡುವ ಸಾಧ್ಯತೆ ಇದೆ. ಮಾ.12 ರಂದು ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ.

Comments

Leave a Reply

Your email address will not be published. Required fields are marked *