ನನ್ನನ್ನು ಗಲ್ಲಿಗೇರಿಸಿ- ಅಪ್ರಾಪ್ತ ಬಾಲಕಿಯ ರೇಪ್ ಮಾಡಿ ಕೊಲೆಗೈದ ಆರೋಪಿಯ ಮನವಿ

ಭೋಪಾಲ್: ನಾನು ಕುಡಿದ ಅಮಲಿನಲ್ಲಿ ತಪ್ಪು ಮಾಡಿದ್ದೇನೆ. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದೇನೆ ಎಂದು ಆರೋಪಿಯೊಬ್ಬ ತನ್ನ ತಪ್ಪೊಪ್ಪಿಕೊಂಡು ಕೋರ್ಟ್ ನಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಕುಡಿದ ಅಮಲಿನಲ್ಲಿದ್ದೆ. ತಪ್ಪು ನಡೆದು ಹೋಯಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ನನ್ನನ್ನು ನೇಣಿಗೇರಿಸಿ ಎಂದು 9 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ 32 ವರ್ಷದ ವಿಷ್ಣು ಪ್ರಸಾದ್ ಕೋರ್ಟ್ ಮುಂದೆ ಮೊರೆಯಿಟ್ಟಿದ್ದಾನೆ. ಮಧ್ಯ ಪ್ರದೇಶದ ಸಿಎಂ ಕಮಲ್‍ನಾಥ್ ಸಂತ್ರಸ್ತೆಯ ಕುಟುಂಬಕ್ಕೆ 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗುತ್ತದೆ ಮತ್ತು ಒಂದು ತಿಂಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಭೋಪಾಲ್‍ನಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇವಲ 48 ಗಂಟೆಗಳಲ್ಲಿ ಮಧ್ಯಪ್ರದೇಶ ಪೊಲೀಸರು ಬೇಧಿಸಿದ್ದಾರೆ. ಕಮಲ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ 108 ಪುಟಗಳ ಚಾರ್ಜ್ ಶೀಟ್ ಹಾಕಲಾಗಿತ್ತು. ವಿಶೇಷ ಪೋಕ್ಸೋ ಕೋರ್ಟ್ ನಲ್ಲಿ ಬುಧವಾರ ಆರೋಪಿಯನ್ನು ಹಾಜರು ಪಡಿಸಲಾಗಿತ್ತು. ಅಲ್ಲಿ ನ್ಯಾಯಧೀಶರು ಆರೋಪಿಯ ವಿಚಾರಣೆ ನಡೆಸಿ, ಇಂದು ಪ್ರಕರಣವನ್ನು ಟ್ರಯಲ್ ಕೋರ್ಟ್ ಗೆ ವರ್ಗಾಯಿಸಲಾಗುತ್ತದೆ ಎಂದಿದ್ದರು.

ಬುಧವಾರ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಆರೋಪಿಯನ್ನು ಈ ಕೃತ್ಯ ಎಸೆಗಲು ಕಾರಣ ಕೇಳಿದಾಗ, ನಾನು ಮದ್ಯದ ಅಮಲಿನಲ್ಲಿದ್ದೆ, ಆಗ ಇದೆಲ್ಲಾ ನಡೆದೋಯಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ನನ್ನನ್ನು ಗಲ್ಲಿಗೇರಿಸಿ ಎಂದು ಕೋರಿಕೊಂಡಿದ್ದಾನೆ. ಅಲ್ಲದೆ ಇದನ್ನು ಆಲಿಸಿದ ನ್ಯಾಯಾಧೀಶರು ಆತನನ್ನು ಜೈಲಿಗೆ ಕಳುಹಿಸಿ ಸದ್ಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.

ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವವರೆಗೆ ಪ್ರಸಾದ್‍ನನ್ನು ಜೈಲಿಗೆ ಕಳುಹಿಸಲಾಗಿದ್ದು, ಆತ್ಮಹತ್ಯೆ ಸಾಧ್ಯತೆ ಇರುವು ಬಗ್ಗೆ ಪೊಲೀಸರು ಜಾಗ್ರತೆ ವಹಿಸಿದ್ದು, ಇಂದೇ ಈ ಪ್ರಕರಣ ಸಂಬಂಧ ತೀರ್ಪು ನೀಡಲಾಗುವುದು ಎಂಬ ಮಾಹಿತಿ ದೊರಕಿದೆ. ಅಲ್ಲದೆ ಆರೋಪಿ ಪರ ಯಾವ ವಕೀಲರು ವಾದ ಮಂಡಿಸದ ಕಾರಣ ಕೋರ್ಟ್ ನಿಂದಲೇ ವಕೀಲರ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *