ಮಾಸಾಶನ ಸೌಲಭ್ಯ ನೀಡಲು ವಿಳಂಬ- ವಿಕಲಚೇತನ ಆತ್ಮಹತ್ಯೆ

ತುಮಕೂರು: ಮಾಸಾಶನ ಸೌಲಭ್ಯ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಮನನೊಂದ ವಿಕಲಚೇತನ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತುಮಕೂರು ತಾಲೂಕಿನ ಲಿಂಗಯ್ಯನಪಾಳ್ಯದ ಗ್ರಾಮದ ಯುವಕ ಧರಣೇಂದ್ರ ಆತ್ಮಹತ್ಯೆ ಮಾಡಿಕೊಂಡ ವಿಕಲಚೇತನ. ಆದಾಯ ಪ್ರಮಾಣ ಪತ್ರದಲ್ಲಿ 15 ಸಾವಿರ ರೂ. ಆದಾಯ ನಮೂದಾಗಿದ್ದರಿಂದ ಮಾಸಾಶನ ನೀಡಲು ನಿರಾಕರಿಸಲಾಗಿತ್ತು. ಆದಾಯ ಪ್ರಮಾಣಪತ್ರ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳು ಹೇಳಿದ್ದರು.

ಈ ಹಿಂದೆ ಹಲವಾರು ಬಾರಿ ದಾಖಲೆ ತಯಾರಿ ಮಾಡಲು ಕಚೇರಿಗೆ ಅಲೆದು ಅಲೆದು ನೊಂದ ಯುವಕ ಮಾಸಾಶನ ನೀಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹೇಳಿದ ಹಾಗೆಯೇ ಸೋಮವಾರ ಲಿಂಗಯ್ಯನಪಾಳ್ಯದ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣದ ಬಗ್ಗೆ ತುಮಕೂರು ಉಪ ವಿಭಾಗಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಆದೇಶಿಸಿದ್ದಾರೆ. ಧರಣೇಂದ್ರ ಸಲ್ಲಿಸಿದ ಅರ್ಜಿ ತಿರಸ್ಕೃತ ಆಗಿಲ್ಲ. ತಪ್ಪು ಮಾಹಿತಿಯಿಂದ ಧರಣೇಂದ್ರ ದುಡುಕಿದ್ದಾರೆ. ಡೇಟಾ ಆಪರೇಟರ್ ಪರಮೇಶ್ವರ್ ತಪ್ಪು ಮಾಹಿತಿ ನೀಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಆರೋಪಿತ ಡೇಟಾ ಆಪರೇಟರ್, “ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಮಾಸಾಶನ ನೀಡಲು ಆದಾಯ ಮಿತಿ 12 ಸಾವಿರ ಇತ್ತು. ಆದರೆ ಧರಣೇಂದ್ರದ್ದು ವಾರ್ಷಿಕ ಆದಾಯ 15 ಸಾವಿರ ಎಂದು ಇತ್ತು. ಅದನ್ನು ಗ್ರಾಮ ಲೆಕ್ಕಾಧಿಕಾರಿಯಿಂದ ಸರಿಪಡಿಸಿಕೊಂಡು ಬರಲು ಹೇಳಿದ್ದೆ. ಅದನ್ನು ಹೊರತುಪಡಿಸಿ ಏನೂ ಹೇಳಿಲ್ಲ. ನನ್ನಿಂದ ಏನೂ ತಪ್ಪು ನಡೆದಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *