ಹಮಾಸ್​​ ಮುಖ್ಯಸ್ಥ ​ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್‌

ಟೆಲ್‌ ಅವಿವ್‌: ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್(Yahya Sinwar) ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.

ಗುರುವಾರ ಗಾಜಾದಲ್ಲಿ (Gaza) ಇಸ್ರೇಲಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಸಾಮೂಹಿಕ ಕೊಲೆಗಾರ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಲಾಗಿದೆ. ಇದು ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದು ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಬಣ್ಣಿಸಿದ್ದಾರೆ.

ಇಸ್ರೇಲಿ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ಮೃತಪಟ್ಟ ವ್ಯಕ್ತಿಯ ದೇಹವು ಸಿನ್ವಾರ್‌ನದೇ ಎಂದು ಡಿಎನ್‌ಎ ಪರಿಶೀಲನೆ ನಡೆಸಿದ ಬಳಿಕ ಆತ ಮೃತಪಟ್ಟಿರುವುದನ್ನು ಅಧಿಕೃತವಾಗಿ ತಿಳಿಸಿವೆ.

ಗಾಜಾದ ಕಟ್ಟಡದ ನೆಲ ಮಹಡಿಯಲ್ಲಿ ನೆಲೆಗೊಂಡಿದ್ದ ಹಮಾಸ್‌ ಉಗ್ರರ ವಿರುದ್ಧ ಇಸ್ರೇಲ್‌ ದಾಳಿ ನಡೆಸಿತ್ತು. ಕಾರ್ಯಾಚರಣೆ ನಡೆಸಿದ್ದ ಕಟ್ಟಡದಲ್ಲಿ ಈತ ನೆಲೆಸಿದ್ದ ವಿಚಾರ ಇಸ್ರೇಲ್‌ಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.


ಯಾಹ್ಯಾ ಸಿನ್ವಾರ್ ಯಾರು?
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್‌ ನಡೆಸಿದ ದಾಳಿ ಬಳಿಕ ಯಾಹ್ಯಾ ಸಿನ್ವಾರ್ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಆಗಸ್ಟ್‌ನಲ್ಲಿ ಇರಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಇಸ್ಮಾಯಿಲ್ ಹನಿಯೆಹ್ ಹತನಾದ ನಂತರ ಹಮಾಸ್ ಮುಖ್ಯಸ್ಥನಾಗಿದ್ದ. 1962 ರಲ್ಲಿ ಜನಿಸಿದ ಸಿನ್ವಾರ್ 1987 ರಲ್ಲಿ ಹಮಾಸ್ ಅನ್ನು ಸ್ಥಾಪಿಸಿದಾಗ ಅದರ ಆರಂಭಿಕ ಸದಸ್ಯರಲ್ಲಿ ಒಬ್ಬನಾಗಿದ್ದ.