ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!

ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎಟಿಎಂ ಸ್ವಿಚ್ ಸರ್ವರ್ ಹ್ಯಾಕ್ ಮಾಡುವ ಮೂಲಕ 94 ಕೋಟಿ ರೂ. ಹಣವನ್ನು ಎಗರಿಸಲಾಗಿದೆ.

ದೇಶದ ಹೊರಗಡೆ ಒಟ್ಟು 12 ಸಾವಿರ ಬಾರಿ ವಹಿವಾಟು ಮಾಡುವ ಮೂಲಕ ಒಟ್ಟು 78 ಕೋಟಿ ರೂ. ಪಡೆದಿದ್ದು, ಭಾರತದಲ್ಲಿ 2,800 ಬಾರಿ ವಹಿವಾಟಿನಿಂದ 80 ಲಕ್ಷ ರೂ. ಹಣವನ್ನು ಕದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಒಂದು ವಹಿವಾಟಿನಲ್ಲಿ 12 ಕೋಟಿ ರೂ.ವನ್ನು ಹಾಂಕಾಂಗ್‍ನಲ್ಲಿರುವ ಹಾನ್ಸೆಂಗ್ ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿದೆ. ಫಲಾನುಭವಿ ಖಾತೆಯು ಎಎಲ್‍ಎಂ ಕಂಪೆನಿ ಎಂದು ಪತ್ತೆಯಾಗಿದೆ. ಒಟ್ಟು ಮೂರು ಹಂತದಲ್ಲಿ ಹ್ಯಾಕರ್ಸ್ ಹಣ ಪಡೆದುಕೊಂಡಿದ್ದು, 94 ಕೋಟಿ ರೂ. ದೋಚಿದ್ದಾರೆ.

ಕೆನಡಾದಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ಆರ್‌ಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ ಎಂದು ಕಾಸ್ಮೋಸ್ ಬ್ಯಾಂಕ್ ಅಧ್ಯಕ್ಷ ಮಿಲಿಂದ್ ಕಾಳೆ ಹೇಳಿದ್ದಾರೆ.

ಇತ್ತ ಪ್ರಕರಣದ ಕುರಿತು ಪುಣೆಯ ಸೈಬರ್ ಕ್ರೈಂ ಸೆಲ್‍ನಲ್ಲಿ ದೂರು ದಾಖಲಾಗಿದೆ. ಮಾಲ್ವೇರ್ ಕಳುಹಿಸಿ ಸರ್ವರ್ ಹ್ಯಾಕ್ ಮಾಡಿ ದಾಳಿ ಮಾಡಲಾಗಿದೆ ಎಂದು ಪುಣೆಯ ಸೈಬರ್ ಕ್ರೈಂ ಸೆಲ್ ಕೇಂದ್ರ ಕಚೇರಿ ಡಿಸಿಪಿ ಜ್ಯೋತಿ ಪ್ರಿಯಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *