ಮತ್ತೆ ಎಲೆಕ್ಷನ್: ಬಸವರಾಜ್ ಹೊರಟ್ಟಿ ಹೇಳಿಕೆಗೆ ವಿಶ್ವನಾಥ್ ಪ್ರತಿಕ್ರಿಯೆ

– ಸಿದ್ದರಾಮಯ್ಯ ವಿರುದ್ಧ ನೇರ ಆರೋಪ

ಬೆಂಗಳೂರು: ಗೊಂದಲಗಳ ಮಧ್ಯೆ ಹೋಗುವುದಕ್ಕಿಂತ ಸರ್ಕಾರ ವಿಸರ್ಜನೆ ಮಾಡಬೇಕು ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, ಹೊರಟ್ಟಿ ಅವರ ಹೇಳಿಕೆ ವೈಯಕ್ತಿಕವಾಗಿದ್ದು. ಸರ್ಕಾರ ವಿಸರ್ಜನೆ ಎಂಬುವುದು ಅನ್ನೋದು ಬಹಳ ದೊಡ್ಡ ಮಾತು. ಇದನ್ನು ತೀರ್ಮಾನ ತೆಗೆದುಕೊಳ್ಳೋಕೆ ದೊಡ್ಡವರು ಇದ್ದಾರೆ ಎಂದು ಹೇಳಿದ್ದಾರೆ.

ಎಚ್‍ಡಿಡಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಯಾವ ದಿಕ್ಕಿನಲ್ಲಿ ಹೋಗಬೇಕು. ಸರ್ಕಾರದ ನಡವಳಿಕೆಗಳು ಏನು? ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುವುದರ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯನವರು ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಮನ್ವಯ ಸುಧಾರಿಸುವಲ್ಲಿ ಅವರ ಸಾಧನೆ ಏನಿದೆ ಎಂದರು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕರೇ ಶೇ. 70 ರಷ್ಟು ಇದ್ದು, ಈಗ ಸಮಾಧಾನ ಏಕೆ ಉಂಟಾಗುತ್ತದೆ ಎಂದು ಪ್ರಶ್ನಿಸಿದರು. ಜೆಡಿಎಸ್ ನಾಯಕರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಸರ್ಕಾರ ವಿಸರ್ಜನೆ ಮಾಡುವ ಹಂತಕ್ಕೆ ಕರ್ನಾಟಕದಲ್ಲಿ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದರು.

ಹೊರಟ್ಟಿ ಅವರು ವಿಧಾನಸಭೆಗೆ ಚುನಾವಣೆ ಎದುರಿಸಿ ಬಂದಿಲ್ಲ. ವಿಧಾನ ಪರಿಷತ್ ನಿಂದ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಅವರಿಗೆ ನಮ್ಮ ಸಂಕಷ್ಟವೂ ಗೊತ್ತಿದೆ. ಮತ್ತೆ ಚುನಾವಣೆಗೆ ಹೋಗೋದು ಅಷ್ಟು ಸುಲಭ ಕಾರ್ಯವಲ್ಲ. ಮೈತ್ರಿ ಸರ್ಕಾರದಲ್ಲಿ ಗೊಂದಲ ಇರುವುದು ನಿಜ. ಅದನ್ನು ಕುಮಾರಸ್ವಾಮಿ ಎಲ್ಲಾ ಗೊಂದಲ ಪರಿಹರಿಸಿಕೊಂಡು ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮನ್ವಯ ಸಮಿತಿಗೆ ನನ್ನ ಸೇರ್ಪಡೆ ಹಾಗೂ ದಿನೇಶ್ ಗುಂಡೂರಾವ್ ಸೇರ್ಪಡೆಗೂ ವಿರೋಧ ಮಾಡುತ್ತಿದ್ದಾರೆ. ಆದರೆ ಕಾಮನ್ ಮಿನಿಮಮ್ ಕಾರ್ಯಕ್ರಮ ರಚನೆ ಮಾಡುತ್ತಿಲ್ಲ. ಏಕೆ ಈ ರೀತಿ ಅಡ್ಡಿ ಮಾಡುತ್ತಿದ್ದಾರೆ ಎಂದು ಅವರಿಗೆ ಕೇಳಬೇಕು. ಸದ್ಯ ಮೇ 23 ರ ನಂತರ ಸಮತಿಗೆ ಸೇರ್ಪಡೆ ಸಂಬಂಧ ಏನಾಗುತ್ತದೆ ಎಂದು ಕಾದು ನೋಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಅವರ ಸಾಧನೆ ಏನು ಎಂದು ಪ್ರಶ್ನೆ ಮಾಡಿದ್ದ ತಮ್ಮ ಹೇಳಿಕೆ ಉಲ್ಟಾ ಹೊಡೆದ ಅವರು, ನಾನು ಸಿದ್ದರಾಮಯ್ಯ ಅವರು ಏನು ಸಾಧನೆ ಮಾಡಿದ್ದಾರೆ ಎಂದು ಕೇಳಲಿಲ್ಲ. ಸಿದ್ದರಾಮಯ್ಯ ಅವರು ಇತರೆ ಸಿಎಂಗಳಿಗಿಂತ ಹೆಚ್ಚು ಕೆಲಸ ಮಾಡಿದೀನಿ ಎಂದಿರುವ ಬಗ್ಗೆ ಪ್ರಶ್ನೆ ಮಾಡಿ, 79 ಸೀಟ್ ಮಾತ್ರ ಗೆದ್ದಿದ್ದು ಏಕೆ ಎಂದು ಮಾತ್ರ ಪ್ರಶ್ನಿಸಿದ್ದಾಗಿ ಸ್ಪಷ್ಟನೆ ನೀಡಿದರು.

Comments

Leave a Reply

Your email address will not be published. Required fields are marked *