ಮಹಿಳೆ ಜೊತೆ ಸಂಭಾಷಣೆಯ ಆಡಿಯೋ ವೈರಲ್: ಹೆಚ್. ವಿಶ್ವನಾಥ್ ಸ್ಪಷ್ಟನೆ

ಬೆಂಗಳೂರು: ಹುಣಸೂರು ಶಾಸಕ ಹೆಚ್. ವಿಶ್ವನಾಥ್ ಅವರ ಧ್ವನಿ ಎನ್ನಲಾದ ಆಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಜೊತೆಯ ಸರಸ ಸಲ್ಲಾಪದ ಆಡಿಯೋ ಇದು ಎನ್ನಲಾಗಿದೆ. ಈ ಆಡಿಯೋ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಾರೋ ಮಿಮಿಕ್ರಿ ಮಾಡಿ ಈ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಯಾರೋ ಈ ಆಡಿಯೋದಲ್ಲಿ ಮಿಮಿಕ್ರಿ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡುವುದು ಸಹಜ. ನಾವು ಪಕ್ಷ ಬಿಟ್ಟಿದ್ದಕ್ಕೆ ನಮ್ಮ ರಾಜಕೀಯದ ಎದುರಾಳಿಗಳು ಕೆಟ್ಟ ಹೆಸರು ತರಲು ಈ ರೀತಿಯ ಕೆಲಸವನ್ನು ಮಾಡಿಸುತ್ತಾರೆ ಎಂದು ಆರೋಪಿಸಿದರು.

ರಾಜಕೀಯಕ್ಕಾಗಿ ಈ ರೀತಿ ಮಾಡಿಸಿದ್ದಾರೆ. ನಾನು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ನಾನು ಏನು, ಯಾವ ತರಹ ಹಾಗೂ ನನ್ನ ಲವ್ ಸ್ಟೋರಿ ಬಗ್ಗೆ ಪುಸ್ತಕ ಬರೆದಿದ್ದೇನೆ. ಯಾರೋ ನಮಗೆ ಆಗದೇ ಇರುವವರು ಈ ರೀತಿ ಮಾಡಿದ್ದಾರೆ. ನಮ್ಮ ಹುಣಸೂರಿನಲ್ಲಿ ಶವಸಂಸ್ಕಾರ ಕೂಡ ಮಾಡಿದ್ದರು. ಈ ರೀತಿ ಆಗುತ್ತಿರುತ್ತದೆ. ಈಗಿನ ರಾಜಕೀಯದ ಸ್ಥಿತಿ ಕೂಡ ಹಾಗೆಯೇ ಇದೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

ಸರಸ ಸಲ್ಲಾಪ ವಿಚಾರ ಜನರ ಕಣ್ಣಿಗೆ, ಕಿವಿಗೆ ಬೇಗ ಹೋಗುತ್ತದೆ. ಹಾಗಾಗಿ ಅವರು ಈ ವಿಷಯ ಇಟ್ಟುಕೊಂಡು ನನಗೆ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಇದು ಕೇವಲ ಕ್ಷಣಿಕ ಅಷ್ಟೇ. ರಾಜೀನಾಮೆ ನೀಡಿದ ಬಳಿಕ ಈ ರೀತಿಯ ಆಡಿಯೋವನ್ನು ಹರಿಬಿಟ್ಟಿದ್ದಾರೆ. ನನಗೆ ಯಾರ ಮೇಲೂ ಅನುಮಾನ ಇಲ್ಲ. ಈ ಆಡಿಯೋ ರಿಲೀಸ್ ಆಗುವ ಮೊದಲು ನನಗೆ ಇಬ್ಬರು ಕರೆ ಮಾಡಿ ನಿಮ್ಮ ವಿರುದ್ಧ ಸೆಕ್ಸ್ ಸ್ಕ್ಯಾಂಡಲ್ ಆರೋಪ ಮಾಡುತ್ತಿದ್ದಾರೆ, ಹುಷಾರಾಗಿರಿ ಎಂದಿದ್ದರು ಎಂದು ವಿಶ್ವನಾಥ್ ತಿಳಿಸಿದರು.

ನಮ್ಮ ಸಾರ್ವಜನಿಕ ಬದುಕು ಜನರಿಗೆ ಗೊತ್ತಿದೆ. ದೊಡ್ಡವರಿಂದ ಚಿಕ್ಕವರವರೆಗೂ ನನ್ನ ವೈಯಕ್ತಿಕ ವಿಚಾರ, ಹಣಕಾಸು ವಿಚಾರ ಎಲ್ಲರಿಗೂ ಗೊತ್ತು. ನಾನು ನನ್ನ ವೈಯಕ್ತಿಕ ವಿಷಯದ ಬಗ್ಗೆ ಪುಸ್ತಕ ಬರೆದಿದ್ದೇನೆ. ಹಾಗಾಗಿ ನಾನು ಈ ವಿಷಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *