ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಚುಕ್ಕಾಣಿ ಪಡೆದಿದ್ದ ಎಚ್ ವಿಶ್ವನಾಥ್ ತಮ್ಮ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರು ನನ್ನನ್ನ ನಂಬಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ ನನ್ನ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ದೇವೇಗೌಡರು ನನ್ನ ಮನವಿ ತಿರಸ್ಕಾರ ಮಾಡಿದರು. ದೇವೇಗೌಡರ ವಿಶ್ವಾಸದ ಬೇಡಿಯ ಬಂಧನಕ್ಕೆ ಒಳಗಾದ ನಾನು, ನನ್ನ ನಿರ್ಧಾರ ವಾಪಸ್ ಪಡೆದಿದ್ದೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದ್ದು, ಪಕ್ಷಕ್ಕಾಗಿ ಮರ ಹತ್ತಿ ಬಾವುಟ ಕಟ್ಟಿರುವ ಕಾರ್ಯಕರ್ತರು ಇದ್ದಾರೆ. ಅಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಅಧಿಕಾರ ಕೊಡಬೇಕು. ಶೀಘ್ರದಲ್ಲೇ ಸಿಎಂ ಹಾಗೂ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಸ್ಥಾನಮಾನ ಕೊಡುತ್ತಾರೆ. ದೇಶ್ಯಾದ್ಯಂತ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಲಿವೆ. ಇಂದು ಹಿಂದಿನ ಜನತಾ ಪರಿವಾರ ಒಂದುಗೂಡಿಸುವ ಅನಿವಾರ್ಯತೆ ಇದೆ. ದೇವೇಗೌಡರು ಕೂಡ ಸಮ್ಮಿಶ್ರ ಸರ್ಕಾರದಲ್ಲೇ ಪ್ರಧಾನಿಯಾಗಿ 10 ತಿಂಗಳು ಅದ್ಭುತ ಕೆಲಸ ಮಾಡಿದರು. ರಾಜ್ಯದಲ್ಲೂ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅಂಬರೀಶ್ ಅಂತ್ಯ ಸಂಸ್ಕಾರದ ಕೆಲಸವನ್ನು ಸರ್ಕಾರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆರವೇರಿಸಿದೆ. ಮಂಡ್ಯ ಬಸ್ ದುರಂತ, ವಿಷ ಪ್ರಾಷಾಣ ದುರಂತ ಘಟನೆಗಳನ್ನು ಸಮರ್ಥವಾಗಿ ಸರ್ಕಾರ ನಿಭಾಯಿಸಿತು. ಹಿಂದಿನ ಸರ್ಕಾರಗಳು ಸಾಲ ಮಾಡಿ ಹೋಗಿದ್ದರು, ರಾಜ್ಯದ ಆರ್ಥಿಕ ಪರಿಸ್ಥಿತಿ ಕಂಡ ಸಿಎಂ ಕುಮಾರಸ್ವಾಮಿ ಅವರು 43 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಧೈರ್ಯ ಮಾಡಿದ್ದಾರೆ. ಇದೆಲ್ಲವನ್ನ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದ್ದು, ವಿಭಾಗದ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply