ಕಾಂಗ್ರೆಸ್ ಮುಕ್ತ ದೇಶಕ್ಕೆ ಮುಂದಾದ ಬಿಜೆಪಿಯವರೇ ಕೈ ಶಾಸಕರ ಕಾಲು ಹಿಡಿದ್ರು: ಸಿಎಂ

ಚಿಕ್ಕಮಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆತುರದಲ್ಲಿದ್ದಾರೆ. ಇಂತಹ ದಿನ ಪ್ರಮಾಣ ವಚನ ಅಂತ ತೀರ್ಮಾನ ಮಾಡುತ್ತಾರೆ. ಅಂತಹ ಮೂರ್ನಾಲ್ಕು ದಿನಗಳು ಈಗಾಗಲೇ ಕಳೆದಿವೆ. ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಮತ ಉಂಟಾಗಿಲ್ಲ. ಕೇವಲ ಊಹಾಪೊಹ ಅಷ್ಟೇ. ಬೆಳಗಾವಿಯ ನಾಯಕರಲ್ಲಿ ಸಣ್ಣ ಮನಸ್ತಾಪವಿತ್ತು. ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದಿದ್ದ ಬಿಜೆಪಿಯವರೇ ಕಾಂಗ್ರೆಸ್ ಶಾಸಕರ ಕಾಲು ಹಿಡಿಯುತ್ತಿದ್ದಾರೆ. ಇಂತಹ ಹಿನಾಯ ಸ್ಥಿತಿ ಬೇಕಿತ್ತಾ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಅಧಿಕಾರ ಇಲ್ಲದಾಗ ಬಂದರೆ ಪ್ರಚಾರ ಕೊಡುವುದಿಲ್ಲ. ಈಗ ಅಧಿಕಾರವಿದೆ ಪ್ರಚಾರ ಕೊಡುತ್ತಿರುವಿರಿ. ದೇವರ ದರ್ಶನಕ್ಕೆ ಬಂದರೂ ಬಿಡುತ್ತಿಲ್ಲ. ದೇವರು, ಗುರುಗಳ ಆಶೀರ್ವಾದಗಳಿಂದಲೇ ಎಲ್ಲರೂ ಬದುಕುವುದು. ಯಾಕೆ ನಂಗೆ ಇಷ್ಟು ಹಿಂಸೆ ಕೊಡುತ್ತೀರಿ? ನನಗೆ ಮಾತ್ರ ಇಷ್ಟೊಂದು ಪ್ರಶ್ನೆ ಕೇಳುತ್ತೀರಿ? ಎಂದು ಪ್ರಶ್ನಿಸಿದ ಅವರು, ನಮ್ಮನ್ನ ತೋರಿಸುವುದು ಒಂದು ನಿಮಿಷವೂ ತಡ ಮಾಡಲ್ಲ. ಟೆಂಪಲ್ ರನ್ ಅದು-ಇದು ಅಂತ ಅಷ್ಟೇ ತಾನೆ ನೀವು ಹೇಳುವುದು. ರಾಜ್ಯದಲ್ಲಿ ಉತ್ತಮ ಮಳೆಗಾಗಿ ದೇವಿ, ಗುರುಗಳನ್ನು ಪ್ರಾರ್ಥಿಸಲು ಬಂದಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ನನಗೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಭಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಎಷ್ಟೋ ಜನ ಮುಖ್ಯಮಂತ್ರಿಗಳು, ಸರ್ಕಾರಗಳು ಬಂದು ಹೋಗಿವೆ. ಇಲ್ಲಿ ಬೇಕಾಗಿರುವುದು ಜನಕ್ಕೆ ಏನು ಬೇಕು? ಅವರ ಕಷ್ಟಗಳೇನು? ಅಂತ ತಿಳಿದುಕೊಳ್ಳುವ ಮುಖ್ಯಮಂತ್ರಿ ಎಂದು ಟಾಂಗ್ ಕೊಟ್ಟರು.

ಸೋಮವಾರ ಸಿಹಿ ಸುದ್ದಿ ನೀಡುತ್ತೇವೆ ಅಂತ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂತಹ ಸಿಹಿ ಸುದ್ದಿ ಎಷ್ಟೋ ಆಗಿ ಹೋಗಿವೆ. ಆದರೆ ಇಲ್ಲಿವರೆಗೂ ಯಾವುದೇ ಸಿಹಿ ಸುದ್ದಿ ನೋಡಲೇ ಇಲ್ಲ ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *