ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ

ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಜಿಮ್ ರವಿ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಜಿಮ್ ರವಿ ನೂರಾರು ಸಿನಿಮಾಗಳಲ್ಲಿ, ಬೇರೆ ಭಾಷೆಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಅಂಗಳಕ್ಕೂ ಎಂಟ್ರಿ ಕೊಟ್ಟು ಬಂದಿರುವ ಇವರು ತಮ್ಮದೇ ಆದ ಜಿಮ್ ಕೂಡ ನಿರ್ಮಾಣ ಮಾಡಿ ಹಲವು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಷ್ಟೆಲ್ಲ ಖ್ಯಾತಿಗಳನ್ನು ತಮ್ಮದಾಗಿಸಿಕೊಂಡಿರುವ ರವಿ, ಹೊಸ ಸಾಹಸವೊಂದಕ್ಕೆ ಮುಂದಾಗಿದ್ದು ಈಗಾಗಲೇ ಜಗಜ್ಜಾಹೀರು ಆಗಿದೆ. ಹೌದು, ಪುರುಷೋತ್ತಮ ಸಿನಿಮಾ ಮೂಲಕ ತೆರೆ ಮೇಲೆ ನಾಯಕ ನಟನಾಗಿ ಮಿಂಚಲು ಸಕಲ ಸಜ್ಜಾಗಿದ್ದಾರೆ ರವಿ. ಸದ್ಯದ ಅಪ್ಡೇಟ್ ವಿಷ್ಯ ಏನಪ್ಪಾ ಅಂದ್ರೆ ಪುರುಷೋತ್ತಮ ಸಿನಿಮಾ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಿರೋದು.

ರವಿಸ್ ಜಿಮ್ ಬ್ಯಾನರ್ ನಿರ್ಮಾಣದಲ್ಲಿ ವಿಜಯ್ ರಾಮೆಗೌಡ ಭೂಕನಕೆರೆ ಪ್ರೆಸೆಂಟ್ ಮಾಡುತ್ತಿರುವ ಚಿತ್ರ ಪುರುಷೋತ್ತಮ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಕಂಪ್ಲೀಟ್ ಮಾಡಿರುವ ಪುರುಷೋತ್ತಮ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಅಮರನಾಥ್ ಎಸ್ ವಿ ಈ ಚಿತ್ರದ ಸೂತ್ರದಾರ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಇವರಿಗೆ ದಿಲ್ದಾರ್, ನಾನು ನಮ್ ಹುಡ್ಗಿ ಖರ್ಚಿಗೊಂದು ಮಾಫಿಯ ನಿರ್ದೇಶನದ ನಂತರ ಮೂರನೇ ಸಿನಿಮಾ. ಇದನ್ನೂ ಓದಿ: ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

ಸೆಟ್ಟೇರಿದ ದಿನದಿಂದಲೂ ಸುದ್ದಿಯಲ್ಲಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಒಟ್ಟು ನಾಲ್ಕು ಹಾಡುಗಳ ಪೈಕಿ ಮೂರು ಹಾಡುಗಳು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿವೆ. ಅದರಲ್ಲೂ ಸಂಸಾರ ಅಂದ್ಮೇಲೆ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಸಮಾಜಕ್ಕೆ ಉತ್ತಮ ಸಂದೇಶವಿರುವ ಈ ಸಿನಿಮಾದಲ್ಲಿ ಕುತೂಹಲ ಭರಿತ ಚಿತ್ರಕಥೆ ಹಾಗೂ ಕಥಾಹಂದರವಿದೆ. ಸಿನಿಮಾ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ನಿರ್ಮಾಣ ಮಾಡಲಾಗಿದ್ದು, ಕಟೆಂಟ್ ಕಂಡು ತೆಲುಗು, ತಮಿಳು ಭಾಷೆಗೆ ಡಬ್ ಮಾಡಲು ಬೇಡಿಕೆ ಬಂದಿದೆ ಎನ್ನುತ್ತದೆ ಚಿತ್ರತಂಡ.

ಚಿತ್ರದಲ್ಲಿ ರವಿಗೆ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಎ.ವಿ.ಹರೀಶ್, ಮೈಸೂರು ಪ್ರಭು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಹಿನ್ನೆಲೆ ಸಂಗೀತ ಶ್ರೀಮಂತಗೊಳಿಸಲು ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕುಮಾರ್ ಎಂ ಕ್ಯಾಮೆರಾ ವರ್ಕ್,ಅರ್ಜುನ್ ಕಿಟ್ಟು ಸಂಕಲನ, ಕಲೈ ನೃತ್ಯ ನಿರ್ದೇಶನ ಪುರುಷೋತ್ತಮ ಚಿತ್ರಕ್ಕಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿರುವ ಪುರುಷೋತ್ತಮ ಚಿತ್ರ ಇದೇ ತಿಂಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

Comments

Leave a Reply

Your email address will not be published. Required fields are marked *