ಹಸ್ತಾಕ್ಷರವಿರೋ ಸಾವಿರ ಸ್ಯಾನಿಟರಿ ಪ್ಯಾಡ್‍ಗಳನ್ನು ಮೋದಿಗೆ ರವಾನಿಸಲಿದ್ದಾರೆ ವಿದ್ಯಾರ್ಥಿಗಳು!

ಭೋಪಾಲ್: ಸ್ಯಾನಿಟರಿ ಪ್ಯಾಡ್ ಮೇಲೆ 12% ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳು ಮೋದಿ ವಿರುದ್ಧ ವಿಶಿಷ್ಠವಾಗಿ ಪ್ರತಿಭಟನೆ ಆರಂಭಿಸಿದ್ದಾರೆ.

ಹೌದು, ಮಹಿಳೆಯರಿಗೆ ಅತ್ಯವಶ್ಯಕವಾಗಿರೋ ಸ್ಯಾನಿಟರಿ ಪ್ಯಾಡ್ ಇದೀಗ ಜಿಎಸ್‍ಟಿ ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಜಿಎಸ್‍ಟಿ ತೆರಿಗೆಯನ್ನು ಪೂರ್ಣವಾಗಿ ತೆಗೆದು ಹಾಕುವಂತೆ ಮಧ್ಯಪ್ರದೇಶ ಗ್ವಾಲಿಯಾರ್ ವಿದ್ಯಾರ್ಥಿಗಳು ಹಸ್ತಾಕ್ಷರವಿರುವ ಸುಮಾರು 1 ಸಾವಿರ ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಹಿಸಲು ನಿರ್ಧರಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿನಿಯರು ಜನವರಿ 4 ರಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಿದ್ದು, ಇದಕ್ಕೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಾಗೂ ಅವರ ಶ್ರೇಯೋಭಿವೃದ್ಧಿಯ ಸಲುವಾಗಿ ವಿದ್ಯಾರ್ಥಿಗಳು ಈ ಅಭಿಯಾನ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್‍ಟಿ ಯಾಕೆ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

ಆದರೆ ಈ ಅಭಿಯಾನ ಕೇವಲ ಗ್ವಾಲಿಯಾರ್ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಡೀ ದೇಶದ ಮಹಿಳೆಯರಿಗೂ ಇದರ ಅಗತ್ಯತೆ ಇದೆ. ಹೀಗಾಗಿ ಸ್ಯಾನಿಟರಿ ಪ್ಯಾಡ್ ಮೇಲೆ ವಿಧಿಸಿರೋ ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯಲು ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಸಮಾಜದ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ ಪ್ಯಾಡ್ ಮೇಲೆ ಬರೆದು ಕಳುಹಿಸಲಾಗುವುದು ಎಂಬುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಹಳ್ಳಿಪ್ರದೇಶದ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸದೇ ತಮ್ಮ ಸಂಪ್ರದಾಯದಂತೆ ಪ್ಯಾಡ್ ಬದಲು ಪರ್ಯಾಯ ಮಾರ್ಗ ಕಂಡುಕೊಂಡಿರುತ್ತಾರೆ. ಇದರಿಂದ ಅವರು ಕೆಲ ರೋಗಗಳಿಗೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹಳ್ಳಿಗಾಡಿನ ಮಹಿಳೆಯರು ಕೂಡ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸುವಂತೆ ಅವುಗಳ ಮೇಲೆ ಹೇರಿರುವ ಜಿಎಸ್‍ಟಿ ತೆರಿಗೆಯನ್ನು ಹಿಂಪಡೆಯುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ನಾವು ಈ ಅಭಿಯಾನ ಆರಂಭ ಮಾಡಿದ್ದೇವೆ ಅಂತ ವಿದ್ಯಾರ್ಥಿ ಮೋಹನ್ ಹೇಳಿದ್ದಾರೆ.

ಒಟ್ಟಿನಲ್ಲಿ ಸ್ವಚ್ಛ ಭಾರತದ ಹೆಸರು ಹೇಳುತ್ತಿರೋ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಸ್ವಚ್ಛತೆಯ ಕಡೆ ಹಾಗೂ ಅವರ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಮಾರ್ಚ್ 3 ರೊಳಗೆ ಸುಮಾರು 1 ಸಾವಿರ ಪ್ಯಾಡ್‍ಗಳನ್ನು ಪ್ರಧಾನಿಗೆ ಕಳುಹಿಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.

Comments

Leave a Reply

Your email address will not be published. Required fields are marked *