ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಪುರುಷರ 56 ಕೆಜಿ ವಿಭಾಗದಲ್ಲಿ ಒಟ್ಟು 249 ಕೆಜಿ ಭಾರ ಎತ್ತಿದ ಅವರು, ಸ್ಕ್ಯಾಚ್ ವಿಭಾಗದಲ್ಲಿ 111 ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ ಪದಕ ಗೆದ್ದಿದ್ದಾರೆ. ಗುರುರಾಜ್ ಮೊದಲ ಪದಕವನ್ನು ಜಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಭಾರತೀಯ ವಾಯುಪಡೆ ಉದ್ಯೋಗಿಯಾಗಿರುವ ಗುರುರಾಜ್, ಟ್ರಕ್ ಚಾಲಕರ ಪುತ್ರರಾಗಿದ್ದಾರೆ. ಇದೀಗ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂಢೀಗಡ್ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್ ಪ್ರತಿದಿನ 4 ಘಂಟೆ ಅಭ್ಯಾಸಕ್ಕೆ ತೆರಳುತ್ತಿದ್ದರು. ಚಿನ್ನ ಗೆದ್ದ ಖುಷಿಯಲ್ಲಿರುವ ಗುರುರಾಜ್ ತನ್ನ ಸಾಧನೆಗೆ ತಂದೆ-ತಾಯಿ, ಕ್ರೀಡೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕರು ಹಾಗೂ ಕೋಚ್ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳುತ್ತಿದ್ದಾರೆ.

ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಕಂಚು ಪದಕ ಹಾಗೂ 2016 ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಗುರುರಾಜ್ ಚಿನ್ನದ ಪದಕ ಗೆದ್ದಿದ್ದರು. 2016ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಣೆ ಮಾಡಿದ್ದರು.

ಪಿವಿ ಸಿಂಧು ಚಾಲನೆ: ಬುಧವಾರ ಭಾರತದ ಪರ ಪಿವಿ ಸಿಂಧು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸುವ ಮೂಲಕ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 21ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಿದ್ದರು. ಈ ಬಾರಿ ಕ್ರೀಡಾಕೂಟದಲ್ಲಿ 71 ರಾಷ್ಟ್ರಗಳ 4,500 ಅಥ್ಲೀಟ್ಸ್ ಭಾಗಿಯಾಗುತ್ತಿದ್ದು, 275 ಗೋಲ್ಡ್ ಮೆಡೆಲ್ ಪಡೆಯಲು ಸ್ಪರ್ಧೆ ನಡೆಸಿದ್ದಾರೆ. ಭಾರತದಿಂದ ಒಟ್ಟು 221 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದು 12 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.

ಈ ಹಿಂದೆ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ ಒಟ್ಟು 64 ಪದಕಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು. ಈ ಬಾರಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಭರವಸೆಯಲ್ಲಿದೆ.

 

Comments

Leave a Reply

Your email address will not be published. Required fields are marked *