ಗುರುಗ್ರಾಮ ಶೂಟೌಟ್ ಕೇಸ್ – ನಾಲ್ಕು ದಿನಗಳಿಂದ ನಿದ್ದೆ ಇಲ್ಲದೇ ಜಡ್ಜ್ ಪತ್ನಿಯನ್ನು ಕೊಂದೇಬಿಟ್ಟ!

ಗುರುಗ್ರಾಮ: ನ್ಯಾಯಾಧೀಶರ ಪತ್ನಿಯನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹಿಪಾಲ್ ಕೌಟುಂಬಿಕ ಸಮಸ್ಯೆಯಿಂದ ನರಳುತ್ತಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ಮಹಿಪಾಲ್ ಹರ್ಯಾಣದ ಗಾಯಕಿ ಕವಯಿತ್ರಿಯೊಬ್ಬರನ್ನು ಮದುವೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ನಿದ್ರೆಯಿಲ್ಲದೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆರೋಪಿ ಗುರು ಮತ್ತು ಗುರುಮಾತೆ ಪ್ರಭಾವಕ್ಕೆ ಒಳಗಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

2016ರಿಂದ ಮಹಿಪಾಲ್ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದು, ಇದೂವರೆಗೂ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ಮಹಿಪಾಲ್ ಜಡ್ಜ್ ಬಗ್ಗೆ ಯಾವುದೇ ದೂರು ನೀಡಿಲ್ಲ. ಹೀಗಾಗಿ ಮಹಿಪಾಲ್ ಈ ಕೃತ್ಯ ಎಸಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನು ಓದಿ:  ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

ಆರೋಪಿಯನ್ನು ಕೆಲಸದಿಂದ ವಜಾಮಾಡಲಾಗಿದ್ದು ಪೊಲೀಸರು 4 ದಿನಗಳ ಕಾಲ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕಾಗಿ ವಿಶೇಷ ತನಿಖಾ ತಂಡವನ್ನು ಹರ್ಯಾಣ ಪೊಲೀಸ್ ರಚಿಸಿದೆ.

ವಿಲಕ್ಷಣ ಪೋಸ್ಟ್ ಹಾಕಿದ್ದ:
ಶೂಟ್ ನಡೆಸುವ ಮುನ್ನ ದಿನವಾದ ಶುಕ್ರವಾರ ಮಹಿಪಾಲ್ ಫೇಸ್‍ಬುಕ್ ನಲ್ಲಿ ವಿಲಕ್ಷಣ ಪೋಸ್ಟ್ ಒಂದನ್ನು ಪ್ರಕಟಿಸಿದ್ದ. ನೀಲಿ ಪೆನ್ನಿನಲ್ಲಿ ‘ಪ್ಯಾಸ್ಟರ್ ರಾಬಿನ್’ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದ. ಈಗ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಮುಂದುವರಿಸಿದ್ದಾರೆ.

ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ ಮಹಿಪಾಲ್ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಿದ್ದ. 2007ರಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಈತ 2008ರಲ್ಲಿ ಮೀನಾ ಅವರನ್ನು ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಮಹಿಪಾಲ್ ಗುರು ಇಂದ್ರಜೀತ್ ಸಿಂಗ್ ಎಂದು ಶಂಕೆ ವ್ಯಕ್ತವಾಗಿದ್ದು, 2015ರ ಆಗಸ್ಟ್ ನಲ್ಲಿ ಮತಾಂತರ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಇಂದ್ರಜೀತ್ ಸಿಂಗ್ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಮಹಿಪಾಲ್ ಸಿಂಗ್ ಮಧ್ಯಸ್ಥಿಕೆಯ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು ಎನ್ನುವ ವಿಚಾರ ತಿಳಿದುಬಂದಿದೆ.

ಆರೋಗ್ಯ ಪರೀಕ್ಷೆಯ ವೇಳೆ ಆತನಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಫಲಿತಾಂಶ ಬಂದಿದ್ದು, ಯಾವುದೋ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಈಗ ವ್ಯಕ್ತವಾಗಿದೆ.

ಗುರುಗ್ರಾಮದಲ್ಲಿ ಶನಿವಾರ ಮಹಿಪಾಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಈ ಕೃತ್ಯ ಎಸಗಿದ್ದ. ಕೃತ್ಯದ ಬಳಿಕ ನ್ಯಾಯಾಧೀಶರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದ. ರಿತು ಮತ್ತು ಧ್ರುವ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಿತು ಮೃತಪಟ್ಟಿದ್ದಾರೆ. ಧ್ರುವ್ ಪರಿಸ್ಥಿತಿ ಗಂಭೀರವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *