ಎಬಿವಿಪಿ ವಿರುದ್ಧದ ಪ್ರತಿಭಟನೆಯಿಂದ ಹಿಂದೆ ಸರಿದ ದೆಹಲಿ ವಿವಿ ವಿದ್ಯಾರ್ಥಿನಿ ಗುರ್‍ಮೆಹರ್

ನವದೆಹಲಿ: ಎಬಿವಿಪಿ ವಿರುದ್ಧ ಮಾತನಾಡಿದ್ದಕ್ಕೆ ಅತ್ಯಾಚಾರದ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಹಾಗೂ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್‍ಮೆಹರ್ ಕೌರ್ ಕ್ಯಾಂಪಸ್‍ನ ಹಿಂಸಾಚಾರದ ವಿರುದ್ಧ ಕರೆ ನೀಡಲಾಗಿದ್ದ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ : ಎಬಿವಿಪಿ ವಿರುದ್ಧ ಮಾತಾಡಿದ್ದಕ್ಕೆ ಕಾರ್ಗಿಲ್ ಹುತಾತ್ಮ ಯೋಧನ ಮಗಳಿಗೆ ಅತ್ಯಾಚಾರದ ಬೆದರಿಕೆ

ಈ ಬಗ್ಗೆ ಟ್ವೀಟ್ ಮಾಡಿರುವ ಗುರ್‍ಮೆಹರ್, ನಾನು ಸಾಕಷ್ಟು ಅನುಭವಿಸಿದ್ದೇನೆ. 20 ವರ್ಷ ವಯಸ್ಸಿನ ನನಗೆ ಸಹಿಸಿಕೊಳ್ಳಲಾಗುವುದು ಇಷ್ಟೆ. ನಾನು ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ. ಎಲ್ಲರಿಗೂ ಅಭಿನಂದನೆ. ನನ್ನನ್ನು ಒಂಟಿಯಾಗಿ ಬಿಡಲು ಮನವಿ ಮಾಡುತ್ತೇನೆ. ನನಗೆ ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ. ನನ್ನ ಧೈರ್ಯವನ್ನು ಪ್ರಶ್ನಿಸುವವರಿಗೆ ನಾನೀಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಧೈರ್ಯ ತೋರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ದೆಹಲಿ ವಿಶ್ವವಿದ್ಯಾಲಯ ಉಳಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಇತರರಿಗೆ ಮನವಿ ಮಾಡಿದ್ದಾರೆ.

ಫೇಸ್‍ಬುಕ್‍ನಲ್ಲಿ ಎಬಿವಿಪಿ ವಿರುದ್ಧ ಪೋಸ್ಟ್ ಹಾಕಿದ ನಂತರ ಅತ್ಯಾಚಾರದ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದ ಗುರ್‍ಮೆಹರ್‍ಗೆ ಸೋಮವಾರದಂದು ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಗುರ್‍ಮೆಹರ್ ಲೇಡಿ ಶ್ರೀರಮ್ ಕಾಲೇಜಿನ ಮೊದಲನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜು ಸಿಬ್ಬಂದಿ ಕೂಡ ಆಕೆಗೆ ಬೆಂಬಲಿಸಿದ್ದಾರೆ.

ಇದನ್ನೂ ಓದಿ : ಕಾರ್ಗಿಲ್ ಹುತಾತ್ಮ ಯೋಧನ ಮಗಳ ಈ ಹಳೇ ಪೋಸ್ಟ್ ಗೆ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಹೀಗೆ

ಏನಿದು ಪ್ರಕರಣ: ಕಳೆದ ಬುಧವಾರ ದೆಹಲಿಯ ರಾಮ್‍ಜಸ್ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಜೆಎನ್‍ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಹಾಗೂ ಶೆಹ್ಲಾ ರಷೀದ್‍ರನ್ನು ಕಲ್ಚರ್ ಆಫ್ ಪ್ರೊಟೆಸ್ಟ್ಸ್ ಎಂಬ ಸೆಮಿನಾರ್ ನೀಡಲು ಆಹ್ವಾಸಲಾಗಿತ್ತು. ಇದಕ್ಕೆ ಅಬಿವಿಪಿ ವಿರೋಧ ವ್ಯಕ್ತಪಡಿಸಿದ್ದೇ ಈ ಗಲಾಟೆಗೆ ಕಾರಣವಾಗಿದೆ. ಇದಾದ ಬಳಿಕ ಗುರ್‍ಮೆಹರ್ ಕೌರ್, ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನು ಒಂಟಿಯಲ್ಲ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ನನ್ನ ಜೊತೆಗಿದ್ದಾರೆ ಎಂಬ ಭಿತ್ತಿಪತ್ರ ಹಿಡಿದಿರುವ ಫೋಟೋವನ್ನ ಫೇಸ್‍ಬುಕ್ ಪ್ರೊಫೈಲ್ ಪಿಕ್ಚರ್ ಮಾಡಿದ್ದರು. ನಂತರ ಈ ಫೋಟೋ ವೈರಲ್ ಆಗಿತ್ತು. ಗುರ್‍ಮೆಹರ್ ಅವರ ಹಳೆಯ ಪೋಸ್ಟ್‍ವೊಂದರ ಬಗ್ಗೆ ಕ್ರಿಕೆಟರ್ ಸೆಹ್ವಾಗ್ ಟ್ವೀಟ್ ಮಡುವ ಮೂಲಕ ಪ್ರತಿಕ್ರಿಯಿಸಿದ್ದರು. ಸಂಸದ ಪ್ರತಾಪ್ ಸಿಂಹ, ಗುರ್‍ಮೆಹರ್ ಅವರನ್ನು ದಾವೂದ್ ಇಬ್ರಾಹಿಂಗೆ ಹೋಲಿಕೆ ಮಾಡಲಾದ ಪೋಸ್ಟ್‍ವೊಂದನ್ನು ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ : ಮಾಧ್ಯಮಗಳೇ, ನನ್ನ ಮಾತಿಗೆ ನಾನು ಬದ್ಧ: ಪ್ರತಾಪ್ ಸಿಂಹ

Comments

Leave a Reply

Your email address will not be published. Required fields are marked *