ಗುಂಡ್ಲುಪೇಟೆಯಲ್ಲಿ ಝಣ ಝಣ ಕಾಂಚಾಣ: ಮತದಾರರಿಗೆ ದುಡ್ಡು ಹಂಚಿದ ಲಕ್ಷ್ಮಿ ಹೆಬ್ಬಾಳ್ಕರ್ ವಿಡಿಯೋ ರಿಲೀಸ್

ಬೆಂಗಳೂರು: ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತದಾರರಿಗೆ ಹಣವನ್ನು ಹಂಚಿಕೆ ಮಾಡುತ್ತಿದೆ ಎನ್ನುವ ಆರೋಪಕ್ಕೆ ಪೂರಕ ಎನ್ನುವುಂತೆ ಬಿಜೆಪಿ ಇಂದು ಮಾಧ್ಯಮಗಳಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಹಣವನ್ನು ಹಂಚಿಕೆ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಕೆಬ್ಬಳ್ಳಿ ಜಿ.ಪಂ. ಕ್ಷೇತ್ರದ ಹೆಣ್ಣೂರು ಕೇರಿ ಗ್ರಾಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಹಣ ಹಂಚಿಕೆ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಮುಖಂಡ ರವಿ ಕುಮಾರ್, ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲುವ ಭೀತಿ ಎದುರಾಗಿದೆ. ನಾವು ಮನೆ ಮನೆಗೆ ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಮುಖಂಡರು ಹಣವನ್ನು ಹಂಚಿಕೆ ಮಾಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಸಚಿವರಾದ ಡಿಕೆ ಶಿವಕುಮಾರ್, ಯುಟಿ ಖಾದರ್, ಎಂಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ನಾಯಕರು ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರು ಅಧಿಕಾರಿಗಳನ್ನು ಬಳಸಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಪೊಲೀಸ್ ವಾಹನದಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ. ರೇಷನ್ ಅಂಗಡಿ, ಹಾಲಿನ ಕೇಂದ್ರದಲ್ಲಿ ಹಣವನ್ನು ಹಂಚುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ರಾಜ್ಯಪಾಲರು ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೇಂದ್ರದ ವಿಶೇಷ ಕಾರ್ಯಪಡೆ ಈ ಚುನಾವಣೆಗೆ ಬರಬೇಕು ಎಂದು ಆಗ್ರಹಿಸಿದರು.

ಹಣವನ್ನು ಹಂಚುವ ಕಾರ್ಯದಲ್ಲಿ ಸರ್ಕಾರವೇ ನೇರವಾಗಿ ಭಾಗಿಯಾಗಿದೆ. ಈ ಚುನಾವಣೆಯಲ್ಲೂ ಇದು ಒಂದಲ್ಲ. ಇಂತಹ ಹಲವರು ಅಕ್ರಮಗಳನ್ನು ಕಾಂಗ್ರೆಸ್ ಎಸಗುತ್ತಿದೆ. ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಈ ತಂತ್ರಕ್ಕೆ ಹೋಗಿದೆ ಎಂದು ರವಿಕುಮಾರ್ ಆರೋಪಿಸಿದರು.

https://www.youtube.com/watch?v=uIzLKO19ZW4

https://www.youtube.com/watch?v=io5uv0Ut_pQ

Comments

Leave a Reply

Your email address will not be published. Required fields are marked *