ಇಂಟರ್‌ನೆಟ್ ನೋಡಿ 35 ವಿಮಾನ ಮಾದರಿ ತಯಾರಿಸಿದ SSLC ಫೇಲಾದ ಯುವಕ

– ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ನಿಂದಲೇ ರೆಡಿಯಾಯ್ತು ವಿಮಾನ

ಗಾಂಧಿನಗರ: ಕೆಲ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಫೇಲ್ ಆದ್ರೆ ಜೀವನವೇ ಮುಗಿತು ಎನ್ನುವಂತೆ ವರ್ತಿಸುತ್ತಾರೆ. ಆದ್ರೆ ಗುಜರಾತಿನ ಯುವಕನೋರ್ವ ಸಾಧನೆ ಮಾಡಲೂ ಶಿಕ್ಷಣ ಪಾಸ್ ಫೇಲ್ ಮುಖ್ಯವಾಗಲ್ಲ ಛಲ ಆಸಕ್ತಿ ಇರಬೇಕು ಎನ್ನುವುದನ್ನು ಸಾಬೀತು ಮಾಡಿದ್ದಾನೆ. 10ನೇ ತರಗತಿಯಲ್ಲಿ ಫೇಲ್ ಆಗಿದ್ದು ಇಂಟರ್‌ನೆಟ್ ನೋಡಿ ಮಾದರಿ ವಿಮಾನ ತಯಾರಿಸಿ ಸಾಧನೆ ಮಾಡುವಲ್ಲಿ ಪಾಸ್ ಆಗಿದ್ದಾನೆ.

ಗುಜರಾತಿನ ವಡೋದರದ ಪ್ರಿನ್ಸ್ ಪಂಚಾಲ್(17) ಸಾಧನೆಗೆ ಎಲ್ಲರೂ ಭೇಷ್ ಎಂದಿದ್ದಾರೆ. ಪ್ರಿನ್ಸ್ 10ನೇ ತರಗತಿಯಲ್ಲಿ ಫೇಲಾಗಿದ್ದನು ಅದು ಒಂದಲ್ಲ, ಎರಡಲ್ಲ, 6 ವಿಷಯಗಳಲ್ಲೂ ಅನುತ್ತೀರ್ಣನಾಗಿದ್ದ. ಇದರಿಂದ ಮನೆಯವರು ಕೂಡ ಪ್ರಿನ್ಸ್ ಮೇಲೆ ಸಿಟ್ಟಾಗಿದ್ದರು. ಫೇಲ್ ಆದ ಬಳಿಕ ಏನು ಮಾಡೋದಪ್ಪ ಎಂದು ಯೋಚಿಸುತ್ತಿದ್ದಾಗ ಪ್ರಿನ್ಸ್ ಸಹಾಯ ಮಾಡಿದ್ದು ಇಂಟರ್‌ನೆಟ್. ವಿಮಾನಗಳ ಮಾದರಿ ತಯಾರಿಸುವ ಬಗ್ಗೆ ಪ್ರಿನ್ಸ್ ಗೆ ಆಸಕ್ತಿ ಇತ್ತು. ಹೀಗಾಗಿ ಪ್ರಿನ್ಸ್ ಮೊದಲು ಇಂಟರ್‌ನೆಟ್ನಲ್ಲಿ ವಿಮಾನ ತಯಾರಿಸುವ ವಿಧಾನಗಳನ್ನು ತಿಳಿಯಲು ಆರಂಭಿಸಿದ. ಬಳಿಕ ವಿಮಾನ ತಯಾರಿಸಲು ಏನೆಲ್ಲಾ ಬೇಕಾಗುತ್ತದೆ ಎನ್ನುವುದನ್ನು ಸಂಗ್ರಹಿಸಿಕೊಂಡ. ನಂತರ ತನಗೆ ಸಿಕ್ಕ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಗಳನ್ನು ಬಳಸಿ ಇಂಟರ್‌ನೆಟ್ ಸಹಾಯದಿಂದ ವಿಮಾನ ಮಾದರಿಗಳನ್ನು ತಯಾರಿಸಲು ಆರಂಭಿಸಿದ.

ಹೀಗೆ ಇಂಟರ್‌ನೆಟ್ ಸಹಾಯದಿಂದಲೇ ಇಲ್ಲಿಯವರೆಗೆ ಪ್ರಿನ್ಸ್ ಸುಮಾರು 35 ಮಾದರಿ ವಿಮಾನಗಳನ್ನು ರೆಡಿ ಮಾಡಿದ್ದಾನೆ. ಎಲ್ಲಾ ವಿಮಾನಗಳು ಹಗುರವಾಗಿದ್ದು, ದೇಶೀಯ ನಿರ್ಮಿತವಾಗಿವೆ. ರಿಮೋಟ್ ಕಂಟ್ರೋಲ್‍ನಿಂದ ಈ ಮಾದರಿ ವಿಮಾನಗಳನ್ನು ಆಪರೇಟ್ ಮಾಡಬಹುದಾಗಿದ್ದು, ಪ್ರಿನ್ಸ್ ಸಾಧನೆ ಎಲ್ಲರ ಮೆಚ್ಚುಗೆ ಪಡೆದಿದೆ. ಅಷ್ಟೇ ಅಲ್ಲದೆ ಪ್ರಿನ್ಸ್ ತನ್ನೆಲ್ಲಾ ವಿಮಾನ ಮಾದರಿಗಳ ಮೇಲೆ ‘ಮೇಕ್ ಇನ್ ಇಂಡಿಯಾ’ ಎಂದು ಬರೆದಿರುವುದು ವಿಶೇಷವಾಗಿದೆ.

ಈ ಮಾದರಿ ವಿಮಾನಗಳನ್ನು ತಯಾರಿಸಲು ನನಗೆ ನನ್ನ ಅಜ್ಜ ಸ್ಪೂರ್ತಿ. ನಾನು 10ನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಫೇಲಾಗಿದ್ದೆ. ಹೀಗಾಗಿ ಮನೆಯಲ್ಲಿ ಸೋಮಾರಿಯಾಗಿ ಸುಮ್ಮನೆ ಇರುತ್ತಿದ್ದೆ. ಹೀಗೆ ಒಂದು ದಿನ ಕುಳಿತ್ತಿದ್ದಾಗ ವಿಮಾನ ತಯಾರಿಸುವ ಯೋಚನೆ ಬಂತು. ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಬಳಸಿ ವಿಮಾನ ತಯಾರಿಸಲು ಆರಂಭಿಸಿದೆ. ಇಂಟರ್‌ನೆಟ್ನಲ್ಲಿ ವಿಡಿಯೋಗಳನ್ನು ನೋಡಿ, ಅದರ ಸಹಾಯದಿಂದ ವಿಮಾನ ಮಾದರಿಗಳನ್ನು ತಯಾರಿಸಿದೆ, ನಾನು ಮಾಡಿದ ವಿಮಾನಗಳ ವಿಡಿಯೋಗಳನ್ನು ಕೂಡ ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಿದೆ ಎಂದು ಪ್ರಿನ್ಸ್ ಹೇಳಿದ್ದಾನೆ.

ಹಾಗೆಯೇ ನಾನು ಮೊದಲು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಪಾಸಾಗಬೇಕು. ನಾನು ಓದಲು ಕುಳಿತರೆ ಮನಸ್ಸು ಭಾರ ಎನಿಸುತ್ತದೆ. ನಾನು ಓದು ಬಿಟ್ಟು ಬೇರೆ ವಿಷಯಗಳಲ್ಲಿ ಆಸಕ್ತಿ ತೋರುವುದಕ್ಕೆ ನನಗೆ ನಮ್ಮ ಏರಿಯಾದಲ್ಲಿ ‘ತಾರೆ ಜಮೀನ್ ಪರ್’ ಹುಡುಗ ಎಂದು ಕರೆಯುತ್ತಾರೆ ಎಂದು ಎಂದು ಪ್ರಿನ್ಸ್ ಹೇಳಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *