ಹೆತ್ತ ತಾಯಿಯನ್ನ ಟೆರೆಸ್‍ನಿಂದ ತಳ್ಳಿ, ಆತ್ಮಹತ್ಯೆ ಅಂತ ನಾಟಕವಾಡಿದ ಪ್ರಾಧ್ಯಾಪಕ

ಗಾಂಧಿನಗರ: ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟೆರೆಸ್‍ನಿಂದ ತಳ್ಳಿ ಕೊಂದಿರುವ ಅಮಾನವೀಯ ಘಟನೆ ಗುಜರಾತ್‍ನ ರಾಜ್‍ಕೋಟ್ ನಗರದಲ್ಲಿ ನಡೆದಿದೆ.

36 ವರ್ಷದ ಸಂದೀಪ್ ನಥ್ವಾನಿ ಕೊಲೆ ಮಾಡಿರುವ ಆರೋಪಿ. ಈತ ಸ್ಥಳೀಯ ಫಾರ್ಮಸಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜೈಶ್ರೀಬೇನ್ ರನ್ನು ಡಿಸೆಂಬರ್ 29 ರಂದು ಅಪಾರ್ಟ್ ಮೆಂಟ್‍ನ ಟೆರೆಸ್‍ನಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಶ್ರೀಬೇನ್ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರಿಂದ ತಮ್ಮ ಸಮತೋಲನ ಕಳೆದುಕೊಂಡು ಟೆರೆಸ್‍ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಥ್ವಾನಿ ಕುಟುಂಬದವರು ಮೊದಲಿಗೆ ಹೇಳಿದ್ದರು. ನಂತರ ಅನಾಮಧೇಯ ಅರ್ಜಿಯೊಂದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯ ಮಾರ್ಗವನ್ನು ಬದಲಿಸಿ ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ.

ಅರ್ಜಿ ಸ್ವೀಕರಿಸಿದ ನಂತರ ನಾವು ಅಪಾರ್ಟ್ ಮೆಂಟ್‍ನ ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಜೈಶ್ರೀಬೇನ್ ಟೆರೆಸ್‍ನಿಂದ ಕೆಳಗೆ ಬಿದ್ದ ಸಂದರ್ಭದಲ್ಲಿ ಸಂದೀಪ್ ಅವರ ಜೊತೆಯಲ್ಲೇ ಇರೋದು ಪತ್ತೆಯಾಗಿದೆ ಎಂದು ಡಿಸಿಪಿ ಕರಣ್ರಾಜ್ ವಘೇಲಾ ಹೇಳಿದ್ದಾರೆ.

ಆರೋಪಿ ಸಂದೀಪ್ ನನ್ನು ಬಂಧಿಸಿ ವಿಚಾರಣೆ ನಡೆಸುವಾಗ ಮೊದಲು ತಾನು ಈ ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದ. ಆದರೆ ನಂತರ ತಪ್ಪೊಪ್ಪಿಕೊಂಡಿದ್ದಾನೆ. ತಾಯಿಯ ಅನಾರೋಗ್ಯದಿಂದ ಬೇಸತ್ತು ತಾನೇ ತಾಯಿಯನ್ನು ಟೆರೆಸ್ ಮೇಲೆ ಕರೆದುಕೊಂಡು ಹೋಗಿ ತಳ್ಳಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *