ಕಾಂಗ್ರೆಸ್ ಶಾಸಕನಿಗೂ ಕೊರೊನಾ- ಸೋಂಕು ದೃಢ ಪಡುವ ಮುನ್ನ ಸಿಎಂ ಭೇಟಿ

ಅಹ್ಮದಾಬಾದ್: ಗುಜರಾತ್‍ನ ಜಮಾಲ್‍ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ ಸೋಂಕಿತ ಶಾಸಕನನ್ನು ಎಸ್‍ವಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕು ದೃಢ ಪಡುವ ಮುನ್ನ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಬಾಯ್ ಪಟೇಲ್ ಮತ್ತು ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಸೇರಿ ಹಲವು ಗಣ್ಯರನ್ನು ಮಂಗಳವಾರ ಬೆಳಗ್ಗೆ ಗಾಂಧಿನಗರದ ಸಚಿವಾಲಯದಲ್ಲಿ ಸೋಂಕಿತ ಶಾಸಕ ಭೇಟಿಯಾಗಿದ್ದರು. ಈ ಹಿನ್ನೆಲೆ ಸಿಎಂ ಪ್ರಮುಖ ಸಚಿವರು ಹೋಮ್ ಕ್ವಾರಂಟೈನ್ ಆಗುವ ಸಾಧ್ಯತೆಗಳಿವೆ.

ಅಹ್ಮದಾಬಾದ್‍ನ ಜಮಾಲ್‍ಪುರ ಪ್ರದೇಶವೂ ಕೊರೊನಾ ಪೀಡಿತವಾಗಿದ್ದು, ಸೋಂಕಿತ ಶಾಸಕ ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದರು. ಈ ವೇಳೆಯೂ ಅವರು ನೂರಾರು ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಸಿಎಂ ವಿಜಯ್ ರೂಪಾನಿ ಶಾಸಕರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸೋಂಕಿತ ಶಾಸಕ ಕೂಡಾ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *