ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನದ ಬಳಿಕ ಕಾಂಗ್ರೆಸ್‍ಗೆ ಡಬಲ್ ಶಾಕ್!

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡಮತದಾನ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಡಬಲ್ ಶಾಕ್ ಸಿಕ್ಕಿದೆ. ಗುಜರಾತ್‍ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರೆ, ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಹಿರಿಯ ನಾಯಕಿ ಅಂಬಿಕಾ ಸೋನಿ ರಾಜೀನಾಮೆ ಸಲ್ಲಿಸಿದ್ದಾರೆ.

ತನ್ನ 77ನೇ ಹುಟ್ಟುಹಬ್ಬದ ದಿನವೇ ಗುಜರಾತ್‍ನ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಹಾಗೂ ಗುಜರಾತ್ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯಿಂದಾಗಿ ಡಿಸೆಂಬರ್‍ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.

ಹುಟ್ಟುಹಬ್ಬದ ಹೆಸರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಹೈಕಮಾಂಡ್ ಎಚ್ಚರಿಸಿದರೂ ಕ್ಯಾರೇ ಮಾಡದ ವಘೇಲಾ ಗಾಂಧಿನಗರದಲ್ಲಿ ಬೆಂಬಲಿಗರ ಸಮಾವೇಶ ನಡೆಸಿ ಕಾಂಗ್ರೆಸ್ ತನ್ನನ್ನು 24 ಗಂಟೆಗಳ ಹಿಂದೆಯೇ ವಜಾ ಮಾಡಿದೆ ಎಂದು ಆರೋಪಿಸಿದರು.

ನಾನು ರಾಜ್ಯದಲ್ಲಿ ಪಕ್ಷವನ್ನು ಕಟ್ಟುವನ್ನು ಬಹಳ ಶ್ರಮಿಸಿದ್ದೆ. ಆದರೆ ನಾನೇ ಈಗ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಸಂತ್ರಸ್ತನಾಗಿದ್ದೇನೆ ಎಂದು ಹೇಳಿದರು.

ಭಾಷಣದಲ್ಲಿ, ನಾನು ಈಗ ಸ್ವತಂತ್ರ ಪಕ್ಷಿ. ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಬಿಡಬಹುದು. ರಾಜೀನಾಮೆ ನೀಡಿದ ಬಳಿಕ ನಾನು ಬಿಜೆಪಿ ಸೇರುವುದಿಲ್ಲ. ಹೊಸ ಪಕ್ಷವನ್ನು ಕಟ್ಟುವುದಿಲ್ಲ. ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ತಿಳಿಸಿದರು.

ಎರಡು ದಶಕಗಳ ಹಿಂದೆ ಬಂಡಾಯ ಎದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ವಘೇಲಾ ಇದೀಗ ‘ಕೈ’ಯನ್ನು ತೊರೆದಿದ್ದಾರೆ. ಆದರೆ ಮುಂದಿನ ನಡೆ ಏನು ಎನ್ನುವುದನ್ನು ವಘೇಲಾ ತಿಳಿಸಿಲ್ಲ. ಈ ನಡುವೆ ಕಾಂಗ್ರೆಸ್ ವಘೇಲಾ ಅವರನ್ನು ನಾವು ಉಚ್ಚಾಟಿಸಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಸ್ವಯಂಸೇವಕಾ ಸಂಘದ ಸದಸ್ಯರಾಗಿದ್ದ ವಘೇಲಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. 1981 ರಿಂದ 1991ರವರೆಗೆ ಗುಜರಾತ್ ಬಿಜೆಪಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಆಂತರಿಕ ಭಿನ್ನಪ್ರಾಯದಿಂದಾಗಿ ಬಿಜೆಪಿ ತೊರೆದು ತನ್ನ ಆಪ್ತ ಶಾಸಕರ ಜೊತೆ ರಾಷ್ಟ್ರೀಯ ಜನತಾ ಪಕ್ಷವನ್ನು ಹುಟ್ಟುಹಾಕಿದ್ದರು. 1996-97ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಇವರು 1997ರಲ್ಲಿ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನಗೊಳಿಸಿದರು.

ಅಂಬಿಕಾ ಸೋನಿ ರಾಜೀನಾಮೆ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ಹಿರಿಯ ನಾಯಕಿ ಅಂಬಿಕಾ ಸೋನಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ಈ ಸುದ್ದಿಗೆ ಪ್ರತಿಕ್ರಿಯಿಸಿದ ಅಂಬಿಕಾ ಸೋನಿ, ಅನಾರೋಗ್ಯ ಕಾರಣದಿಂದಾಗಿ ನಾನು ಬಿಡುಗಡೆ ಮಾಡುವಂತೆ ಕೇಳಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಹಿಮಾಚಲ ಪ್ರದೇಶದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ
ಸಚಿವಾಲಯದ ಸಚಿವೆಯಾಗಿದ್ದ ಅಂಬಿಕಾ ಸೋನಿ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸ್ವೀಕರಿಸಿದಯೋ ಇಲ್ಲವೋ ಎನ್ನುವುದು ಇನ್ನು ತಿಳಿದು ಬಂದಿಲ್ಲ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಗುಜರಾತ್ ನಲ್ಲಿ ಕೈಗೆ ಶಾಕ್

 

Comments

Leave a Reply

Your email address will not be published. Required fields are marked *