ʼನನ್ನ ಆದರ್ಶ ನಾಥೂರಾಂ ಗೋಡ್ಸೆʼ – ಭಾಷಣ ಸ್ಪರ್ಧೆ ಆಯೋಜಿಸಿದ್ದ ಅಧಿಕಾರಿ ಸೇವೆಯಿಂದ ಅಮಾನತು

ಅಹಮದಾಬಾದ್: ವಿದ್ಯಾರ್ಥಿಗಳಿಗೆ ನಾಥೂರಾಂ ಗೋಡ್ಸೆಯ ಬಗ್ಗೆ ಭಾಷಣ ಸ್ಪರ್ಧೆ ಆಯೋಜಿಸಿದ್ದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

‘ಮಾರೋ ಆದರ್ಶ್ ನಾಥೂರಾಂ ಗೋಡ್ಸೆ’ (ನನ್ನ ಆದರ್ಶ ನಾಥೂರಾಂ ಗೋಡ್ಸೆ) ಎಂಬ ವಿಷಯದ ಬಗ್ಗೆ ವಲ್ಸಾದ್ ಜಿಲ್ಲೆಯ ಹಲವು ಸರ್ಕಾರಿ ಮತ್ತು ಖಾಸಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಬೆನ್ನಲ್ಲೇ ಸ್ಪರ್ಧೆ ಆಯೋಜಿಸಿದ್ದ ಯುವಜನ ಅಭಿವೃದ್ಧಿ ಅಧಿಕಾರಿ ನೀತಾಬೆನ್ ಗಾವ್ಲಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಗುಜರಾತ್ ಸರ್ಕಾರದ ಯುವಜನ ಸೇವೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆ ಈಗ ವಿಚಾರಣೆ ಆರಂಭಿಸಿದೆ.

ಸೋಮವಾರ ಗುಜರಾತ್ ಸರ್ಕಾರದ ಯುವಜನ ಸೇವಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಇಲಾಖೆಯಡಿಯಲ್ಲಿ ಜಿಲ್ಲಾ ಮಟ್ಟದ ಬಾಲಪ್ರತಿಭಾ ಶೋಧ ಸ್ಪರ್ಧೆ ಅಂಗವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಗಿತ್ತು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತವನ್ನು ಅಜ್ಜಂದಿರು ಆಯ್ಕೆ ಮಾಡಿದ್ದು ಯಾಕೆ: ಹಿಜಬ್‌ ವಿವಾದಕ್ಕೆ ಸ್ವಾಮಿ ಪ್ರಶ್ನೆ

ಈ ಕಾರ್ಯಕ್ರಮವನ್ನು ಆಯೋಜಿಸಲು ಶಾಲೆಯ ಆವರಣವನ್ನು ಮಾತ್ರ ನೀಡಿದ್ದೇವೆ ಮತ್ತು ಶಾಲೆಯ ಯಾರೂ ಅದರಲ್ಲಿ ಭಾಗವಹಿಸಲಿಲ್ಲ ಎಂದು ಕುಸುಮ್‌ ವಿದ್ಯಾಲಯ ತಿಳಿಸಿದೆ.

ಜಿಲ್ಲಾ ಶಿಕ್ಷಣಾಧಿಕಾರಿ ಬಿ ಡಿ ಬಾರಯ್ಯ ಪ್ರತಿಕ್ರಿಯಿಸಿ, ಜಿಲ್ಲಾ ಯುವ ವಿಕಾಸ ಕಛೇರಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಯುವ ವಿಕಾಸ ಕಛೇರಿಯು ಫೆಬ್ರವರಿ 8 ರಂದು ಜಿಲ್ಲೆಯ ಎಲ್ಲಾ 25 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪತ್ರವನ್ನು ರವಾನಿಸಿ ಫೆಬ್ರವರಿ 14 ರಂದು ವಲ್ಸಾದ್‌ನ ತಿಥಾಲ್ ರಸ್ತೆಯಲ್ಲಿರುವ ಕುಸುಮ್ ವಿದ್ಯಾಲಯದಲ್ಲಿ ನಡೆಯಲಿರುವ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಕೋರಿತ್ತು ಎಂದು ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಈ ಸ್ಪರ್ಧೆಯನ್ನು ಖಂಡಿಸಿದ್ದಾರೆ. ಭಾಷಣ ಸ್ಪರ್ಧೆಯ ಹೆಸರಿನಲ್ಲಿ ಗೋಡ್ಸೆ ಒಬ್ಬ ಹೀರೋ ಎಂದು ಮಕ್ಕಳಿಗೆ ಕಲಿಸುವುದು ಅತ್ಯಂತ ನಾಚಿಕೆಗೇಡಿನ ಪ್ರಯತ್ನ. ಮಕ್ಕಳ ಮನಸ್ಸಿನಲ್ಲಿ ಮಹಾತ್ಮ ಗಾಂಧಿಯ ಬಗ್ಗೆ ದ್ವೇಷವನ್ನು ಸೃಷ್ಟಿಸಲು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗೋಡ್ಸೆ ಪೂಜೆಯನ್ನು ಬಿಜೆಪಿ ನಿಲ್ಲಸದೇ ಇದ್ದರೆ ನಾವು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *