ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ ಉಮ್ರಾಲ ತಾಲೂಕಿನ ಟಿಂಬಿ ಗ್ರಾಮದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಎಂ ಸೈಯದ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಪ್ರದೀಪ್ ಶವಪತ್ತೆಯಾದ ಪ್ರದೇಶದಲ್ಲಿ ಸಾವಿಗೂ ಮುನ್ನ ಕುದುರೆ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಹಳೆ ದ್ವೇಷ ಹಾಗೂ ಪ್ರೀತಿ-ಪ್ರೇಮ ಹೀಗೆ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ್ದಾರೆ.

ಮಗನನ್ನು ಕಳೆದುಕೊಂಡ ತಂದೆ ಕುಲ್ ಭಾಯ್ ರಾಥೋಡ್ ಉಮ್ರಾಲ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಇತ್ತೀಚೆಗೆ ಕುದುರೆಯೊಂದನ್ನು ಖರೀದಿಸಿದ್ದನು. ಆ ಬಳಿಕ ಕೆಲ ಮೇಲ್ವರ್ಗದ ಜನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅಲ್ಲದೇ ಕುದುರೆ ಮಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಗುರುವಾರ ಮಗ ತನ್ನ ಕುದುರೆಯೊಂದಿಗೆ ಫಾರ್ಮ್ ಹೌಸ್ ಹೋಗಿದ್ದನು. ಬಳಿಕ ಸಂಜೆ ಅಲ್ಲಿಂದ ಕರೆ ಮಾಡಿ ರಾತ್ರಿಯ ಊಟಕ್ಕೆ ಮನೆಗೆ ಬರುತ್ತೇನೆ ಅಂತ ಹೇಳಿದ್ದನು. ಆದ್ರೆ ರಾತ್ರಿಯಾದ್ರೂ ಆತ ಮನೆಗೆ ಬರಲಿಲ್ಲ. ಹೀಗಾಗಿ ನಾವು ಆತನ ಹುಡುಕಾಟ ಶುರುಮಾಡಿದೆವು. ಈ ವೇಳೆ ಆತ ಫಾರ್ಮ್ ಹೌಸ್ ಗೆ ಹೋಗೋ ಮಾರ್ಗದ ಬದಿಯಲ್ಲೆ ಕೊಲೆಯಾಗಿ ಹೋಗಿದ್ದನು. ಕುದುರೆಯೊಂದಿಗೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ರಜಪೂತ ವ್ಯಕ್ತಿಗಳು ಹರಿತವಾದ ಆಯುಧಗಳನ್ನು ಬಳಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತ ಪ್ರದೀಪ್ ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಘಟನೆಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆಂದಲ್ಲಿ ಮನಗ ಶವಸಂಸ್ಕಾರ ಮಾಡುವುದಿಲ್ಲ ಎಂದು ಪ್ರದೀಪ್ ಪೋಷಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *