ಪ್ರವಾಹದಲ್ಲಿ ಸಿಲುಕಿದ್ದ ಮಕ್ಕಳನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ ಪೇದೆ: ವಿಡಿಯೋ

ಗಾಂಧಿನಗರ: ಗುಜರಾತ್‍ನಲ್ಲಿ ಭೀಕರ ಮಳೆಯಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಪೊಲೀಸ್ ಪೇದೆಯೊಬ್ಬರು ಭುಜದ ಮೇಲೆ ಹೊತ್ತು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ಪೇದೆ ಪೃಥ್ವಿರಾಜ್ ಜಡೇಜಾ ಅವರು ಶನಿವಾರ ಮೊರ್ಬಿ ಜಿಲ್ಲೆಯ ಪ್ರವಾಹ ಸಂತ್ರಸ್ತರ ರಕ್ಷಣೆಗೆ ನಿಯೋಜನೆ ಗೊಂಡಿದ್ದರು. ಈ ವೇಳೆ ತಂಕರ ಪಟ್ಟಣದಲ್ಲಿ ಇಬ್ಬರು ಬಾಲಕಿಯರು ಪ್ರವಾಹಕ್ಕೆ ಸಿಲುಕಿದ್ದರು. ಆ ಮಕ್ಕಳನ್ನು ಪೇದೆ ಪೃಥ್ವಿರಾಜ್ ಅವರು ಭುಜದ ಮೇಲೆ ಹೊತ್ತು ಪ್ರವಾಹದ ಮಧ್ಯೆ ಸುಮಾರು 1.5 ಕಿಮೀ ದೂರ ಸಾಗಿ ರಕ್ಷಣೆ ಮಾಡಿದ್ದಾರೆ.

ಪೃಥ್ವಿರಾಜ್ ಅವರ ಸಾಹಸದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಫೇಸ್‍ಬುಕ್, ಟ್ವಿಟ್ಟರ್ ಹಾಗೂ ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೃಥ್ವಿರಾಜ್ ಅವರ ಕರ್ತವ್ಯ ನಿಷ್ಠೆ ಹಾಗೂ ಮಾನವೀಯತೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಗುಜರಾತ್‍ನ ಡಿಜಿಪಿ ಷಂಷೀರ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ನಮ್ಮ ಭುಜ ನಿಮ್ಮ ರಕ್ಷಣೆಗಾಗಿ ಇವೆ. ಮೊರ್ಬಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಪೃಥ್ವಿರಾಜ್ ಅವರು ವೀರರಂತೆ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂತ್ರಸ್ತರಿಗೆ ಅಭಯ ನೀಡಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕೂಡ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ನಮ್ಮ ವೀರ ಯೋಧರು, ಭದ್ರತಾ ಸಿಬ್ಬಂದಿ ಬದ್ಧತೆ ಹಾಗೂ ತ್ಯಾಗವನ್ನು ಮೆರೆಯುತ್ತಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೋಡಿ ಎಂದು ತಿಳಿಸಿದ್ದಾರೆ.

https://twitter.com/DVSadanandGowda/status/1160372596191289346

Comments

Leave a Reply

Your email address will not be published. Required fields are marked *