ಸಾರ್ವಜನಿಕ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗೈದ ಕೈ ಶಾಸಕ: ವಿಡಿಯೋ ನೋಡಿ

ಅಹಮದಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಠಾಕೂರ್ ಸಮುದಾಯದ ನಾಯಕ ಅಲ್ಪೇಶ್ ಠಾಕೂರ್ ನೋಟುಗಳ ಸುರಿಮಳೆಗೈದಿದ್ದಾರೆ.

ಶನಿವಾರ ರಾತ್ರಿ ಜಿಲ್ಲೆಯ ರಧನ್ ಪೂರ್ ಪಟ್ಟಣದ ಭಭರ್ ರಸ್ತೆಯಲ್ಲಿನ ಬಾಲಕರ ಹಾಸ್ಟೆಲ್ ನಲ್ಲಿ ಸಾಂಸ್ಕೃತಿಕಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ 10 ರೂ. ನೋಟುಗಳನ್ನು ಮನಬಂದಂತೆ ಮಳೆಯ ರೂಪದಲ್ಲಿ ಎಸೆಯುತ್ತಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಧನ್ ಪುರ ಪಟ್ಟಣದಲ್ಲಿ ಬಾಲಕಿಯರ ವಸತಿ ಶಾಲೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಜಾನಪದ ಸಂಗೀತ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಇದರಲ್ಲಿ ಠಾಕೂರ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರೂ ಸಹ ಭಾಗಿಯಾಗಿದ್ದರು. ಅಲ್ಲದೇ ಈ ಕಾರ್ಯಕ್ರಮಕ್ಕೆ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಮುಖ್ಯಸ್ಥ ಅಮಿತ್ ಚಾವ್ಡಾ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ್ದರು.

ಅಲಂಕಾರಕ್ಕಾಗಿ ಅಥವಾ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನೋಟುಗಳನ್ನು ಎಸೆಯಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ತಿಳಿಸುತ್ತದೆ. ಆದರೆ ಇಲ್ಲಿ ರಿಸರ್ವ್ ಬ್ಯಾಂಕಿನ ನಿಯಮವನ್ನು ಗಾಳಿಗೆ ತೂರಿ ಶಾಸಕ ಅಲ್ಪೇಶ್ ಠಾಕೂರ್ ನೋಟುಗಳನ್ನು ತೂರಿದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗಳು ಕೇಳಿಬಂದಿವೆ.

ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಲ್ಪೇಶ್ ಠಾಕೂರ್, ನನಗೆ ರಿಸರ್ವ್ ಬ್ಯಾಂಕ್ ನಿಯಮಗಳ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. ಬಾಲಕಿಯರ ವಸತಿ ನಿಲಯ ನಿರ್ಮಿಸಲು ಅನುಕೂಲವಾಗಲೆಂದು ಈ ಕೆಲಸ ಮಾಡಿದ್ದೇನೆ. ಕೆಲ ಜನರು ಜನಪ್ರಿಯತೆಗಾಗಿ ಕಾರ್ಯಕ್ರಮಗಳಲ್ಲಿ ಹಣ ತೂರುತ್ತಿದ್ದರು. ಆದರೆ ನಾನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ನಾನು 10 ರೂ. ನೋಟುಗಳಷ್ಟೇ ಎಸೆದಿದ್ದೇನೆ ಎಂದು ಹೇಳಿ ತನ್ನ ಕೆಲಸವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಉಪಸ್ಥಿತರಿದ್ದ ಅಮಿತ್ ಜಾವ್ಡಾ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರಹೋಗಿದ್ದಾರೆ. ಕಾರ್ಯಕ್ರಮದ ಉದ್ದೇಶವೇನೋ ಒಳ್ಳೆಯದ್ದೇ ಇತ್ತು. ಆದರೆ ಕಾರ್ಯಕ್ರಮದಲ್ಲಿ ಹಣದ ಮಳೆ ಸುರಿದಿರುವುದು ತಪ್ಪು ಎಂದು ಜಾವ್ಡಾ ಹೇಳಿದ್ದಾರೆ.  ಇದನ್ನೂ ಓದಿ:  ಅಲ್ಪೇಶ್ ಠಾಕೂರ್ ಯಾರು? ಇವರು ಕಾಂಗ್ರೆಸ್ ಸೇರಿದ್ದು ಯಾಕೆ?

Comments

Leave a Reply

Your email address will not be published. Required fields are marked *