ಜಿಟಿಡಿ ಬಾಯಲ್ಲಿ ಅಶ್ಲೀಲ ಪದ ಪ್ರಯೋಗ – ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಮೈಸೂರು: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅವ್ಯಾಚ ಶಬ್ದ ಪ್ರಯೋಗ ಮಾಡಿದ್ದು, ನಿಯಮಗಳ ಅನುಸಾರ ಕಾರ್ಯನಿರ್ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪಲಿನ ಮೈದಾನದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ತಮ್ಮ ಅನುಭವ ಬಿಚ್ಚಿಟ್ಟ ಅವರು, ಅಧಿಕಾರಿಗಳು ಸಾರ್ವಜನಿಕರ ಜಮೀನು ಖಾತೆ ಮಾಡಿಲು ಮನವಿ ಮಾಡಿದರೆ ಸಾವಿರ ಕಥೆ ಹೇಳಿ ಲಂಚ ಕೇಳುತ್ತಾನೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹ ಒಂದು ಖಾತೆಗಾಗಿ ಒಂದು ಲಕ್ಷ ರೂ. ಲಂಚ ಕೇಳಿದ್ದಾನೆ ಎಂದು ಏಕವಚನ ಪ್ರಯೋಗ ಮಾಡಿದರು.

ಇದೇ ವೇಳೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ವರ್ತನೆ ಬಗ್ಗೆ ಕಿಡಿಕಾರಿದ ಅವರು, ಹಿಂದಿನ ಸರ್ಕಾರ ಇದ್ದಾಗ ಅವರು ಹೇಳಿದಂತೆ ಕುಣಿದಿದ್ದೀರಿ, ತಪ್ಪುಗಳನ್ನು ಮಾಡಿದ್ದೀರಿ. ಈಗ ನಿಮ್ಮ ವರ್ತನೆ ಬದಲಾಗದಿದ್ದರೆ ನಿಮಗೆ ಉಳಿಗಾಲವಿಲ್ಲ. ನಾನೂ ನಿಮಗೆ ತೊಂದರೆ ಕೊಡುವುದಿಲ್ಲ. ನೀವು ಬದಲಾಗಬೇಕು ಅಷ್ಟೆ. ಕ್ಷೇತ್ರ ವ್ಯಾಪ್ತಿಯಲ್ಲಿ ವಸತಿ ಇಲ್ಲದ ಎಲ್ಲಾ ಜನರ ಸರ್ವೇ ಕಾರ್ಯವನ್ನ ಈ ತಿಂಗಳ ಕೊನೆ ವೇಳೆಗೆ ಪಟ್ಟಿ ತಯಾರಿಸಿ ಮಾಹಿತಿ ನೀಡಿ ಎಂದು ವೇದಿಕೆಯಲ್ಲೇ ಸೂಚನೆ ನೀಡಿದರು.

ತಮಗೆ ನೀಡಿರುವ ಉನ್ನತ ಶಿಕ್ಷಣ ಇಲಾಖೆ ಖಾತೆ ಸಮುದ್ರದಂತಹ ಖಾತೆ. ಈ ಖಾತೆಯಲ್ಲಿ ನಾನೂ ಪಾಸಾಗ ಬೇಕಾದರೆ ಕ್ಷೇತ್ರದ ಜನರ ಸಹಕಾರ ಬೇಕು. ಮೊದಲಿನಂತೆ ಮದುವೆ, ಸಾವು, ನಾಮಕರಣ ಎಲ್ಲಾ ಕಾರ್ಯಕ್ರಮಕ್ಕೆ ಬರುವುದಕ್ಕೆ ಆಗುವುದಿಲ್ಲ. ಎಲ್ಲಾ ಕಾರ್ಯಕ್ರಮಕ್ಕೆ ಬರುತ್ತ ಕುಳಿತರೆ ಖಾತೆಯಲ್ಲಿ ನಾನೂ ಫೇಲ್ ಆಗುತ್ತೇನೆ. ನಿಮ್ಮ ಕಾರ್ಯಕ್ರಮಗಳಿಗೆ ನನ್ನ ಮಗ ಅಥವಾ ಪತ್ನಿ ಬರುತ್ತಾರೆ. ನನಗೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.

https://www.youtube.com/watch?v=jVEnumeRcKA

https://www.youtube.com/watch?v=Je5bZkJ7vf4

Comments

Leave a Reply

Your email address will not be published. Required fields are marked *