ಅರಮನೆ ನಗರಿಯಲ್ಲೊಂದು ಸ್ನೋ ಪಾರ್ಕ್

ಮೈಸೂರು: ಅರಮನೆ ನಗರಿಯಲ್ಲಿ ಜಿಆರ್‌ಎಸ್‌ ಸ್ನೋ ಪಾರ್ಕ್ ಆರಂಭವಾಗಿದ್ದು, ಇದು ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನ ಹೊಸ ಆಕರ್ಷಣೆಯಾಗಿದೆ.

ಮೇಟಗಳ್ಳಿಯ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್ ಆವರಣದಲ್ಲಿ ದೇಶದ ಅತಿದೊಡ್ಡ ಹಿಮೋದ್ಯಾನ(ಸ್ನೋ ಪಾರ್ಕ್) ತೆರೆಯಲಾಗಿದೆ. ಬರೋಬ್ಬರಿ 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಾರಣಕ್ಕಾಗಿ ದೇಶದಲ್ಲೇ ಅತಿದೊಡ್ಡ ಸ್ನೋ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ದುಬೈನಲ್ಲಿರುವ ಸ್ನೋಪಾರ್ಕ್ ಗೆ ಇದು ಹೋಲುವಂತಿದೆ. ಬೃಹತ್ ಸೇತುವೆಗಳು, ಶಿಖರಗಳ ನಡುವೆ ಹಾದುಹೋಗುವ ಸೈಡ್ಲ್, ಕ್ಯಾರ್ ಸೋಲ್, ಹಿಮದ ಗುಹೆಗಳು, ಹಿಮ ಪರ್ವತದ ಪುಟಾಣಿ ರೈಲು ಪ್ರಮುಖ ಆಕರ್ಷಣೆಯಾಗಿದೆ.

-8ರಿಂದ -10 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ಉಷ್ಣಾಂಶ ಹೊಂದಿರುವ ದೇಶದ ಮೊದಲ ಸ್ನೋ ಪಾರ್ಕ್ ಎಂಬುದು ಮತ್ತೊಂದು ದಾಖಲೆಯಾಗಿದೆ. ಆಟದ ನಡುವೆಯೇ ಬಿಸಿ ಬಿಸಿ ಕಾಫಿ ಸವಿಯುವ ಅವಕಾಶ ಕೂಡ ಇದೆ. ಮಕ್ಕಳಿಂದ ಹಿರಿಯರವರೆಗೂ ಮಂಜಿನ ಪ್ರಪಂಚದಲ್ಲಿ ಮುಳುಗೇಳಬಹುದಾಗಿದೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸ್ನೋ ಪಾರ್ಕ್ ಉದ್ಘಾಟಿಸಿ ಖುಷಿಪಟ್ಟಿದ್ದು, ಸ್ನೋ ಪಾರ್ಕ್ ಒಳಗೆ ತೆರಳಿ ಮಂಜಿನ ಅನುಭವ ಪಡೆದರು. ಜಾಕೆಟ್, ಸ್ನೋ ಬೂಟ್ ಧರಿಸಿ ಜಾಲಿ ಮೂಡ್‍ನಲ್ಲಿ ಸಚಿವ ಸಾ.ರಾ. ಮಹೇಶ್ 10 ನಿಮಿಷ ಸ್ನೋ ಪಾರ್ಕ್ ಆಟವಾಡಿ ಕಾಲಕಳೆದರು. ಸಚಿವರಿಗೆ ಜಿಆರ್‍ಎಸ್ ಎಂಡಿ ಯೋಗೇಶ್ ದಾಂಗೆ ಸಾಥ್ ನೀಡಿದರು.

ಹಿಮೋದ್ಯಾನದ ಒಳಭಾಗದಲ್ಲಿ 1 ಅಡಿಯಷ್ಟು ಹಿಮ ಇದೆ. ಮೈ ನಡುಗಿಸುವ ಚಳಿಯ ನಡುವೆ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಬಹುದು. ಹಿಮ ಎರಚಾಡಿ ಮಸ್ತಿ ಮಾಡಬಹುದು. ತೂಗು ಸೇತುವೆ, ಜಾರು ಬಂಡೆ, ಸ್ಲೈಡ್, ಕ್ಯಾರಾಸೋಲ್, ಆರ್ಟಿ ನೆಟ್ ಕ್ಲೈಂಬ್, ಎಸ್ಕಿಮೋ ಇಗ್ಲು, ಹಿಮದ ಗುಹೆ, ಟೈರ್ ಮೇಲೆ ಕುಳಿತು ಜಾರುವುದು ಸೇರಿದಂತೆ ವೈವಿಧ್ಯಮಯ ಮನರಂಜನಾ ವ್ಯವಸ್ಥೆ ಮಾಡಲಾಗಿದೆ ಎಂದು ಯೋಗೀಶ್ ದಾಂಗೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *