300 ಕಿ.ಮೀ ದೂರದಲ್ಲಿದ್ದ ವಧುವಿನ ಮನೆಗೆ ಬೈಕಿನಲ್ಲೇ ಪಯಣ

– ಮದ್ವೆಯಾಗಿ 18 ತಿಂಗಳಿಂದ ಕಾಯ್ತಿದ್ದ ವರ
– ವಿವಾಹವಾಗಿ ಪತ್ನಿಯೊಂದಿಗೆ ವಾಪಸ್

ಲಕ್ನೋ: ಕೊರೊನಾ ವೈರಸ್ ಭೀತಿಯಿಂದ ಭಾರತ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ವರನೊಬ್ಬ ಬೈಕಿನಲ್ಲೇ ವಧುವಿನ ಮನೆಗೆ ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನಲ್ಲಿ ನಡೆದಿದೆ.

ವಿಕಾಸ್ ಕುಮಾರ್ (22) ಬೈಕಿನಲ್ಲಿ ತೆರಳಿ ಮದುವೆಯಾದ ವರ. ಕೊರೊನಾ ವೈರಸ್ ಭೀತಿಯ ಮಧ್ಯೆಯೂ ಈ ಮದುವೆ ಜತನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದುಮಗ ವಿಕಾಸ್ ಕುಮಾರ್ ಬೈಕಿನಲ್ಲಿ ಹಿಂದೆ ತಂದೆ ಇದ್ದರು. ಇಬ್ಬರು ಸ್ನೇಹಿತರು ಮತ್ತೊಂದು ಬೈಕಿನಲ್ಲಿದ್ದರು. ನಾಲ್ವರು 300 ಕಿ.ಮೀ ದೂರದಲ್ಲಿದ್ದ ವಧುವಿನ ಮನೆಗೆ ಹೋಗಿದ್ದಾರೆ. ಅಲ್ಲಿ ಸರಳವಾಗಿ ಮದುವೆ ಮುಗಿಸಿಕೊಂಡು ವಧುವಿನ ಜೊತೆ ತನ್ನ ಮನೆಗೆ ವರ ವಾಪಸ್ ಆಗಿದ್ದಾನೆ.

ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನಸೀರ್‌ಪುರ ಗ್ರಾಮದ ವರ ವಿಕಾಸ್ ಕುಮಾರ್ (22) ಕಳೆದ 18 ತಿಂಗಳಿನಿಂದ ತನ್ನ ಮದುವೆಗೆ ಸಿದ್ಧನಾಗಿ ಕುತೂಹಲದಿಂದ ಕಾಯುತ್ತಿದ್ದನು. ವಿಕಾಸ್ ಇಷ್ಟಪಟ್ಟಿದ್ದ ಹುಡುಗಿಯ ಜೊತೆಯೇ ಮದುವೆ ನಿಗದಿಯಾಗಿತ್ತು. ವಿಕಾಸ್ ತನ್ನ ವಿವಾಹ ಅದ್ಧೂರಿಯಾಗಿ ಸಂಬಂಧಿಕರು, ಸ್ನೇಹಿತರ ಮಧ್ಯೆ ನಡೆಯಬೇಕೆಂದು ಇಷ್ಟಪಟ್ಟಿದ್ದನು. ಅದಕ್ಕಾಗಿ ತಯಾರಿ ಕೂಡ ಮಾಡಿಕೊಂಡಿದ್ದನು.

ಕೊರೊನಾ ವೈರಸ್‍ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಆತನ ಮದುವೆ ಸಿದ್ಧತೆಗಳು ಕೂಡ ಕ್ಯಾನ್ಸಲ್ ಆಗಿದ್ದವು. ಆದರೆ ವಿಕಾಸ್‍ಗೆ ಮದುವೆಯನ್ನು ಮುಂದೂಡಲು ಇಷ್ಟವಿರಲಿಲ್ಲ. ಕೊನೆಗೆ ಸರಳವಾಗಿ ವಿವಾಹವಾಗಲು ನಿರ್ಧರಿಸಿ ಬೈಕಿನಲ್ಲೇ ತನ್ನ ಹುಡುಗಿಯ ಮನೆಗೆ ಹೋಗಿ ಮದುವೆಯಾಗಿದ್ದಾನೆ.

ಮದುವೆಯಲ್ಲಿ ವರ ಮತ್ತು ವಧು ಸೇರಿದಂತೆ ಎಲ್ಲರೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿದ್ದಾರೆ. ನನ್ನ ಮದುವೆ ಅದ್ಧೂರಿಯಾಗಿ ನಡೆಯಬೇಕೆಂದು ಕನಸು ಕಂಡಿದ್ದೆ. ಆದರೆ ಕೊರೊನಾ ವೈರಸ್‍ನಿಂದ ಅದು ಸಾಧ್ಯವಾಗಿಲ್ಲ. ಆದರೂ ಈ ಲಾಕ್‍ಡೌನ್ ಮಧ್ಯೆಯೂ ಮದುವೆಯಾಗಿದ್ದು ನನಗೆ ಸಂತೋಷವಾಗಿದೆ. ಲಾಕ್‍ಡೌನ್ ಮುಗಿದು ನಂತರ ನಾವು ಮತ್ತೆ ಮದುವೆ ಸಂಭ್ರಮವನ್ನು ಆಚರಿಸಿಕೊಳ್ಳುತ್ತೇವೆ ಎಂದು ವರ ವಿಕಾಶ್ ಹೇಳಿದ್ದಾನೆ.

Comments

Leave a Reply

Your email address will not be published. Required fields are marked *