– ಬೆಂಗಳೂರು ಕಾಂಪೌಂಡ್ ಕುಸಿದು ವರ ಸಾವು
ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಅಲ್ಲಲ್ಲಿ ಮರಗಳು ಧರೆಗುಳಿದಿವೆ. ಗರುಡಚಾರ್ಯ ಪಾಳ್ಯದಲ್ಲಿ ಕಾಂಪೌಂಡ್ ಕುಸಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಬಾರದು ಎಂದು ಪಾಲಿಕೆ ಕೂಡ ಫುಲ್ ಅಲರ್ಟ್ ಆಗಿದೆ.
ತಮಿಳುನಾಡಿನಲ್ಲಿ ಚಂಡಮಾರುತ ಮತ್ತು ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ಸ್ವಲ್ಪ ಮಟ್ಟಿಗೆ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಟೌನ್ ಹಾಲ್, ಸೇರಿದಂತೆ ಹಲವಡೆ ಭಾರಿ ಮಳೆಯಾಗಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಯ್ತು.

ಬನಶಂಕರಿ, ಜೆಪಿ ನಗರದಲ್ಲಿ ಮಳೆಗೆ ಮರಗಳು ಧರೆಗುರುಳಿದವು. ಇನ್ನು ಮತ್ತಿಕೆರೆಯಲ್ಲಿ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಹಸಿ ಮರಕ್ಕೆ ಬೆಂಕಿ ಹತ್ತಿಕೊಂಡಿತ್ತು. ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಫನಿ ಚಂಡಮಾರುತ ರಾಜ್ಯಕ್ಕೂ ಅಪ್ಪಳಿಸುವ ಭೀತಿ ಶುರುವಾಗಿದೆ. ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ಮತ್ತು ಪ್ರಾಕೃತಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಹೇಳಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಸುರಿದಿದ್ದು ಅಲ್ಪ ಮಳೆಯೇ. ಆದರೂ ನಗರದ ಕೆಲವಡೆ ಮರಗಳು ಧರೆಗುರುಳಿವೆ. ಮರಗಳನ್ನು ಹಾಗೂ ತಗ್ಗು ಪ್ರದೇಶಗಳಲ್ಲಿ ನಿಂತುಕೊಂಡ ನೀರನ್ನು ಪಾಲಿಕೆ ತ್ವರಿತಗತಿಯಲ್ಲಿ ತೆರವು ಮಾಡಿತು. ಈ ಮಧ್ಯೆ ವಾಡ್9 ನಂಬರ್ 82ರ ಗರುಡಚಾರ್ಯ ಪಾಳ್ಯದ, ಗೋಶಾಲಾ ಮುಖ್ಯ ರಸ್ತೆಯಲ್ಲಿ, ಗೋಶಾಲ ಟ್ರಸ್ಟ್‍ನ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿತಕ್ಕೆ, ಮದುವೆಗೆ 15 ದಿನಗಳು ಬಾಕಿ ಇರುªವಾಗಲೇ ಆಂಧ್ರ ಮೂಲದ ವರ ಶಿವಕೈಲಾಸರೆಡ್ಡಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಾಲಿಕೆ ಕೂಡ ಮಳೆಯಿಂದಾಗುವ ಅನಾಹುತಗಳನ್ನು ತಡೆಯಲು ಫುಲ್ ಅಲರ್ಟ್ ಆಗಿದೆ. ಪಾಲಿಕೆಯ ಎಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ವಲಯಗಳಲ್ಲಿನ ವರದಿಯ ಮಾಹಿತಿಯನ್ನು ಮೇಯರ್ ಗೆ ತಿಳಿಸಿದ್ದಾರೆ.

Leave a Reply