ವಿಜಯಪುರ: ಇಲ್ಲಿನ ಗೋಲ್ ಗುಂಬಜ್ ಎಷ್ಟು ಫೇಮಸ್ಸೋ ದ್ರಾಕ್ಷಿ ಬೆಳೆ ಕೂಡ ಅಷ್ಟೇ ಹೆಸರುವಾಸಿಯಾಗಿದೆ. ವಿಜಯಪುರದ ದ್ರಾಕ್ಷಿಗೆ ಯೂರೋಪ್ ಸೇರಿದಂತೆ ದೇಶದ ಹಲವೆಡೆ ಭಾರೀ ಬೇಡಿಕೆ ಇದೆ. ಆದರೆ ಇದೀಗ ದ್ರಾಕ್ಷಿ ಬೆಳೆ ಕುಂಠಿತವಾಗಿದೆ.
ಐತಿಹಾಸಿಕ ಜಿಲ್ಲೆ, ಗುಮ್ಮಟಗಳ ಜಿಲ್ಲೆ, ಬರದ ನಾಡು ಎಂದು ವಿಜಯಪುರವನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ. ಇದರ ಜೊತೆಗೆ ದ್ರಾಕ್ಷಿ ಕಣಜ ಎಂದು ಕರೆಯುತ್ತಾರೆ. ವಿಜಯಪುರದ ದ್ರಾಕ್ಷಿ ನಮ್ಮ ದೇಶದಲ್ಲೆಡೆ ಸೇರಿಂದಂತೆ ಯೂರೋಪ್, ಅಮೆರಿಕಾದಂತಹ ಹೊರ ದೇಶದವರೆಗೆ ರಫ್ತಾಗುತ್ತದೆ. ಒಣ ದ್ರಾಕ್ಷಿ ಕೂಡ ಪ್ರಪಂಚದ ಅನೇಕ ಕಡೆ ರಫ್ತಾಗುತ್ತದೆ. ಆದರೆ ಈಗ ಈ ದ್ರಾಕ್ಷಿಯ ಕಣಜದ ಹೆಸರು ಅಳಿಸಿ ಹೋಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಆದಕ್ಕೆ ಪ್ರಮುಖ ಕಾರಣ ಪ್ರತಿ ವರ್ಷ ಕೈ ಕೊಡುತ್ತಿರುವ ದ್ರಾಕ್ಷಿ ಬೆಳೆ.

ರಾಜ್ಯದಲ್ಲೇ ಅತೀ ಹೆಚ್ಚು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 12 ಸಾವಿರ ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತೆ. ರೈತರು ಏಪ್ರಿಲ್ ತಿಂಗಳಷ್ಟೊತ್ತಿಗೆ ಮಾಡಬೇಕಿದ್ದ ದಾಕ್ಷಿ ಕಟ್ಟಿಂಗ್ (ಚಾಟ್ನಿ) 25% ನಷ್ಟು ಮಾಡಿಲ್ಲ. ಆದ್ದರಿಂದ ಅಕ್ಟೊಬರ್ ತಿಂಗಳಲ್ಲಿ ನೀರಿಕ್ಷೆ ಮಾಡಿದಷ್ಟು ಫಸಲು ಬಂದಿಲ್ಲ. ಇದರಿಂದ ಇಳುವರಿಯಲ್ಲಿ ಇಳಿಮುಖವಾಗಿದ್ದು, ಈ ಬಾರಿ 30 ರಿಂದ 40% ಇಳುವರಿ ಕಡಿಮೆ ಬರುತ್ತೆ. ಇದಕ್ಕೆಲ್ಲ ಪ್ರಮುಖ ಕಾರಣ ವರುಣನ ಅವಕೃಪೆ, ಅಂತರ್ಜಲ ಕುಸಿತ, ಬೋರ್ ವೆಲ್ ನಲ್ಲಿ ನೀರಲ್ಲದ್ದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬರದ ನಾಡು ಖ್ಯಾತಿಯ ವಿಜಯಪುರ ಜಿಲ್ಲೆಯ ರೈತರು ನಿರಂತರ ವರುಣನ ಅವಕೃಪೆಯಿಂದ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ದ್ರಾಕ್ಷಿಗೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯಲ್ಲೇ ದ್ರಾಕ್ಷಿ ಸಿಗದಂತಾಗುತ್ತೆ. ಇದರಿಂದ ದ್ರಾಕ್ಷಿ ಬೆಳೆಗಾರರು ಆತಂಕಗೊಂಡಿದ್ದು, ಅಂತರ್ಜಲ ಹೆಚ್ಚಿಸುವಲ್ಲಿ ಸರ್ಕಾರ ಹೊಸ ಯೋಜನೆ ರೂಪಿಸಿ ದಿಟ್ಟ ಹೆಜ್ಜೆ ಇಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply