ಮೋದಿ ಸರ್ಕಾರದಿಂದ ರಾಜಕೀಯ, ವೈಯಕ್ತಿಕ ಸೇಡು: ಸುರ್ಜೇವಾಲ

-ರಾಜ್ಯಪಾಲರು ಬಿಜೆಪಿಯ ಕೈಗೊಂಬೆ

ನವದೆಹಲಿ: ಮೋದಿ ಸರ್ಕಾರ ರಾಜಕೀಯ ಮತ್ತು ವೈಯಕ್ತಿಕ ಸೇಡು ತೀರಿಸಿಕೊಳ್ಳುತ್ತಿದೆ. ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Singh Surjewala) ಎಕ್ಸ್‌ನಲ್ಲಿ ಬಿಜೆಪಿ (BJP) ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್‍ಗೆ (Prosecution) ಅನುಮತಿ ನೀಡಿದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‍ನ ಐದು ಖಾತರಿಗಳನ್ನು ರದ್ದುಗೊಳಿಸುವ ಸಲುವಾಗಿ ಬಿಜೆಪಿಯಿಂದ ಕರ್ನಾಟಕದ ಜನರ ಮೇಲೆ ದಾಳಿ ಮಾಡುತ್ತಿದೆ. ಬಡವರು, ಹಿಂದುಳಿದವರು, ಎಸ್‍ಸಿ, ಎಸ್‍ಟಿ ಮತ್ತು ಹಿಂದುಳಿದ ವರ್ಗಗಳ ವಿರುದ್ಧ ಬಿಜೆಪಿ ಮತ್ತು ಮೋದಿ ಸರ್ಕಾರದಿಂದ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬೆಂಬಲಕ್ಕೆ ನಿಂತಿದೆ.

ಸಿದ್ದರಾಮಯ್ಯಗೆ ಕಾಂಗ್ರೆಸ್ ನಾಯಕರಾದ ಸುರ್ಜೇವಾಲ ಹಾಗೂ ಕೆ.ಸಿ ವೇಣುಗೋಪಾಲ್ ಕರೆ ಮಾಡಿ ಅಭಯ ನೀಡಿದ್ದಾರೆ. ನೀವು ಧೈರ್ಯಗೆಡುವ ಅಗತ್ಯವಿಲ್ಲ. ಹೈಕಮಾಂಡ್ ನಿಮ್ಮೊಂದಿಗೆ ಇರಲಿದೆ. ಇಡೀ ಪಕ್ಷ ನಿಮ್ಮೊಂದಿಗೆ ನಿಲ್ಲಲಿದೆ. ಇಡೀ ಕ್ಯಾಬಿನೆಟ್ ಶಾಸಕರೆಲ್ಲ ನಿಮ್ಮ ಪರ ನಿಲ್ಲಲಿದ್ದಾರೆ. ಧೈರ್ಯದಿಂದ ಕಾನೂನು ಹೋರಾಟ ನಡೆಸಿ ಎಂದು ಸಿಎಂಗೆ ಧೈರ್ಯ ತುಂಬಿದ್ದಾರೆ.