ಆಸ್ಪತ್ರೆ, ಬ್ಯಾಂಕು, ಎಟಿಎಂ, ಶಾಲೆ-ಕಾಲೇಜು ಎಲ್ಲಾ ಇರೋ ಊರಲ್ಲೇ ಜೆಡಿಎಸ್ ಸಚಿವರಿಂದ ಗ್ರಾಮವಾಸ್ತವ್ಯ!

ಮೈಸೂರು: ಸಕಲ ಸೌಕರ್ಯವೂ ಇರೋ ಹಳ್ಳಿಯಲ್ಲಿ ಜೆಡಿಎಸ್ ಸಚಿವರ ರಾತ್ರಿ ವಾಸ್ತವ್ಯ ಹೂಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ.

ಹರದನಹಳ್ಳಿಗ್ರಾಮ ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಶಾಲೆಗಳು ಲಭ್ಯ. ಪದವಿ ಪೂರ್ವ ಕಾಲೇಜು, ಮೆಟ್ರಿಕ್‍ನಂತರ ಹಾಸ್ಟೆಲ್ ಸಹ ಕಾರ್ಯನಿರ್ವಹಿಸುತ್ತಿವೆ. ಸುಸಜ್ಜಿತ ರಸ್ತೆ, ಕೃಷಿ ಸಹಕಾರಿ ಪತ್ತಿನ ಸಂಘ, ಪಶು ಆರೋಗ್ಯ ಕೇಂದ್ರವು ಗ್ರಾಮದಲ್ಲಿದೆ. ಗ್ರಾಮವಾಸ್ತವ್ಯ ಮಾಡುತ್ತಿರುವ ಗ್ರಾಮದಲ್ಲಿ ಎಟಿಎಂ ಸಹ ಲಭ್ಯವಿದೆ.

ಮೈಸೂರಿನ ಕೆ.ಆರ್.ನಗರದ ಹರದನಹಳ್ಳಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರನ್ನು ಗ್ರಾಮದ ಜೆಡಿಎಸ್ ಮುಖಂಡರು ಅದ್ಧೂರಿ ಸ್ವಾಗತ ಮಾಡಿದ್ರು. ಬಳಿಕ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಿದ ಸಚಿವ ಸಾ.ರಾ.ಮಹೇಶ್ ತಮ್ಮ ಮೊಬೈಲ್‍ನಲ್ಲಿ ಪಟ್ಟಿ ಮಾಡಿಕೊಂಡ ಅಧಿಕಾರಿಗಳ ಹೆಸರುಗಳನ್ನು ತಾವೇ ಕೂಗಿ ಹಾಜರಿ ಪಡೆದುಕೊಂಡರು. ಅಧಿಕಾರಿಗಳ ಸಭೆಯ ಮುಕ್ತಾಯದ ಬಳಿಕ ಜೆಡಿಎಸ್ ಮುಖಂಡ ವಿಜಯಕುಮಾರ್ ಮನೆಯಲ್ಲಿ ಭರ್ಜರಿ ಊಟ ಮಾಡಿದರು.

ಬಳಿಕ ಮಾತನಾಡಿದ ಸಚಿವರು, ನನ್ನ ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿಯವರೇ ಆದರ್ಶವೆಂದು ಹೇಳಿದರು. ಸರ್ಕಾರದ ಬಳಿಗೆ ಜನರು ಬರೋದಕ್ಕಿಂತ ಜನರ ಬಳಿಗೆ ಸರ್ಕಾರ ಬರಬೇಕು ಅನ್ನೋದೆ ನಮ್ಮ ಉದ್ದೇಶವಾಗಿದೆ. ಸಿಎಂ ಕುಮಾರಸ್ವಾಮಿಯವರು ಸಹ ಶಿಘ್ರದಲ್ಲೇ ಗ್ರಾಮವಾಸ್ತವ್ಯವನ್ನ ಮತ್ತೆ ಪ್ರಾರಂಭಿಸುತ್ತಾರೆ ಅಂದ್ರು.

ಹರದನಹಳ್ಳಿ ಗ್ರಾಮ ಸಚಿವ ಸಾ.ರಾ.ಮಹೇಶ್ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಗ್ರಾಮವಾಗಿದ್ದು, ತನ್ನದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಉದ್ದೇಶ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಮಾಡುವುದಾಗಿದೆ. ಆದ್ರೆ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯದ ಉದ್ದೇಶ ಏನು ಅನ್ನೋದೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಎಲ್ಲ ವ್ಯವಸ್ಥೆ ಇರುವ ಗ್ರಾಮದಲ್ಲಿ ವಾಸ್ತವ್ಯ ಯಾಕಾಗಿ ಅಂತ ಅಧಿಕಾರಿಗಳಲ್ಲೂ ಗೊಂದಲದ ಪ್ರಶ್ನೆಯೊಂದು ಮೂಡಿದೆ.

Comments

Leave a Reply

Your email address will not be published. Required fields are marked *