ಉಡುಪಿಯಲ್ಲಿ 20 ಕೆಜಿ ಧಾನ್ಯಗಳಲ್ಲಿ ಪ್ರತ್ಯಕ್ಷನಾದ ಗಣಪ!

ಉಡುಪಿ: ವಿಘ್ನ ನಿವಾರಕನ ಆರಾಧಾನ ದಿನವಾದ ಇಂದು, ಉಡುಪಿಯ ರಾಧಾ ಸಂಸ್ಥೆಯ ಟಿವಿಎಸ್ ಶೋ ರೂಂನಲ್ಲಿ ಧಾನ್ಯಗಳ ರೂಪ ಪಡೆದು ಗಣೇಶ ಪ್ರತ್ಯಕ್ಷನಾಗಿದ್ದಾನೆ. ಸುಮಾರು 12 ಅಡಿ ಎತ್ತರ ಹಾಗೂ 6 ಅಡಿ ಅಗಲದ ಧಾನ್ಯಗಳಿಂದ ಮಾಡಿದ ಗಣಪತಿ ಈಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಎಂಬವರು ಈ ಧಾನ್ಯರೂಪದ ಗಣಪನಿಗೆ ರೂಪ ತಂದಿದ್ದಾರೆ. ಇದಕ್ಕಾಗಿ ಸುಮಾರು 20 ಕೆಜಿ ಧಾನ್ಯಗಳನ್ನು ಉಪಯೋಗಿಸಿಕೊಂಡು ನಯನಮನೋಹರವಾಗಿ ಗಣಪನನ್ನು ಸೃಷ್ಟಿಸಿದ್ದಾರೆ.

ಈ ಧಾನ್ಯ ಗಣಪನ ಕಲಾಕೃತಿ ರಚನೆಯಲ್ಲಿ ಕಡ್ಲೆಬೇಳೆ, ಹುರಿಗಡಲೆ, ಅವರೆ, ಬಟಾಣಿ, ಸಾಸಿವೆ, ಬೀನ್ಸ್ ಹಾಗೂ ಸಾಬಕ್ಕಿಯಿಂದ ಸಿದ್ಧಗೊಂಡಿದೆ. ಕಳೆದ 10 ದಿನಗಳಿಂದ ಶ್ರಮವಹಿಸಿ, ಮೈದಾಹಿಟ್ಟಿನ ಅಂಟು ಬಳಕೆ ಮಾಡಿಕೊಂಡು, ಧಾನ್ಯಗಳನ್ನು ಅಂಟಿಸುತ್ತಾ, ಜೊತೆಗೆ ಪೇಪರ್, ಮರ ಹಾಗೂ ಥರ್ಮಾಕೋಲ್ ಒಳಗೊಂಡತೆ ಈ ಬೃಹತ್ ಕಲಾಕೃತಿಗೆ ಗಣಪನ ರೂಪವನ್ನು ಕೊಟ್ಟಿದ್ದಾರೆ.

ಒಂದು ವಾರಗಳ ಕಾಲ ಪ್ರದರ್ಶನದ ನಂತರ ಈ ಗಣಪನ ಮೂರ್ತಿಯಲ್ಲಿ ಗಮ್ ಬಳಸದೇ ನೈಸರ್ಗಿಕ ಮೈದಾ ಹಿಟ್ಟನ್ನು ಬಳಸಿರುವುದರಿಂದ ಈ ಧಾನ್ಯಗಳನ್ನು ಪುನಃ ಆಹಾರವಾಗಿ ಉಪಯೋಗಿಸಲಾಗುತ್ತದೆ. ಕಳೆದ ಐದು ವರ್ಷಗಳಿಂದಲೂ ವಿಭಿನ್ನ ಹಾಗೂ ಪರಿಸರ ಸ್ನೇಹಿ ಗಣಪನನ್ನು ಮಾಡಿಕೊಂಡು ಬರುತ್ತಿರುವ ಟಿವಿಎಸ್ ಶೋರೂಮಿನವರು ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಈ ಕುರಿತು ತಯಾರಕರಾದ ಶ್ರೀನಾಥ್ ಹಾಗೂ ರವಿ ಮಾತನಾಡಿ, ಕಲಾವಿದರಿಗೆ ಗಣೇಶ ಪ್ರಸಿದ್ಧ ದೇವರು. ಗಣಪನ ಮೂರ್ತಿಯನ್ನು ನಮ್ಮ ಆಲೋಚನೆ ಹಾಗೂ ಕನಸಿನಂತೆ ತಯಾರು ಮಾಡಬಹುದು. ನಾವು ಮಾಡುವ ಗಣಪ ಪರಿಸರಕ್ಕೆ ಮಾರಕವಾಗದೆ ಇದ್ದರೇ ಸಾಕು ಅನ್ನುವುದು ನಮ್ಮಯ ಆಶಯ. ಪ್ರತಿ ವರ್ಷ ರಾಧಾ ಸಂಸ್ಥೆಯವರು ಇಂತಹ ಗಣಪನ ಮೂರ್ತಿಗಳನ್ನು ತಯಾರಿಸಲು ಅವಕಾಶ ಕೊಡುತ್ತಿದ್ದು, ಮುಂದಿನ ವರ್ಷ ಮತ್ತೊಂದು ವಿಭಿನ್ನ ಗಣಪನನ್ನು ತಯಾರಿಸುತ್ತೇವೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *