ಪ್ರಾಣ ಕಂಟಕ ಬ್ಲೂವೇಲ್ ಗೇಮ್‍ನ ಎಲ್ಲಾ ಲಿಂಕ್ ತೆಗೆಯಲು ಕೇಂದ್ರ ಸೂಚನೆ

ನವದೆಹಲಿ: ಮಕ್ಕಳ ಆತ್ಮಹತ್ಯೆಗೆ ಪ್ರೇರಣೆ ನೀಡುವ `ಸಾವಿನ ಗೇಮ್’ ಎಂದೇ ಕುಖ್ಯಾತಿ ಹೊಂದಿರುವ ಬ್ಲೂವೇಲ್ ಚಾಲೆಂಜ್ ಆಟದ ಎಲ್ಲಾ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಸಮಾಜಿಕ ಜಾಲತಾಣ ಹಾಗೂ ಸಂಪರ್ಕ ತಾಣಗಳಿಗೆ ಸೂಚನೆ ನೀಡಿದೆ.

ಮಕ್ಕಳು ಅಂತರ್ಜಾಲದಲ್ಲಿ ಬ್ಲೂವೇಲ್ ಗೇಮ್ ಆಡುವ ಮೂಲಕ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ. ಹೀಗಾಗಿ ಕೂಡಲೇ ಅದರ ಲಿಂಕ್‍ಗಳನ್ನು ತೆಗೆದು ಹಾಕಬೇಕೆಂದು ಗೂಗಲ್, ಫೇಸ್‍ಬುಕ್, ವಾಟ್ಸಾಪ್, ಇನ್‍ಸ್ಟಾಗ್ರಾಂ, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶಿಸಿದೆ.

ಏನಿದು ಬ್ಲೂವೇಲ್ ಗೇಮ್?: ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್‍ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಬ್ಲೂ ವೇಲ್ ಗೇಮ್  ಹೆಸರಲ್ಲಿ ಅಥವಾ ಬೇರೆ ಹೆಸರಲ್ಲಿ ಅದೇ ರೀತಿಯಾಗಿರುವ ಗೇಮ್‍ಗಳ ಲಿಂಕ್‍ಗಳನ್ನು ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದೆ.

ಇದನ್ನೂ ಓದಿ: ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

ಈ ರೀತಿಯ ಗೇಮ್‍ಗಳು ಇಂಟರ್ನೆಟ್‍ನಲ್ಲಿ ಇರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿದೆ. ಈ ಗೇಮ್‍ನ ಅಡ್ಮಿನ್ ಮಕ್ಕಳನ್ನ ಗೇಮ್ ಆಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದಿಸುತ್ತಾರೆ. ಇದರಿಂದ ಮಕ್ಕಳು ಅತ್ಯಂತ ಅಪಾಯಕಾರಿ ಘಟ್ಟವನ್ನ ತಲುಪಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.

ಈ ಮಾರಣಾಂತಿಕ ಗೇಮ್‍ನ ಎಲ್ಲಾ ಲಿಂಕ್‍ಗಳನ್ನ ತೆಗೆಯಬೇಕು ಹಾಗೂ ಈ ಗೇಮ್‍ನ ಪ್ರತಿಪಾದಕರ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Comments

Leave a Reply

Your email address will not be published. Required fields are marked *