90 ವರ್ಷ ಉಳುಮೆ ಮಾಡಿದ ಭೂಮಿ ಈಗ ಅವರದ್ದಲ್ಲ: ಕೊಟ್ಟು ಕಿತ್ತುಕೊಂಡ ಸರ್ಕಾರ

-ಅನಧಿಕೃತ ಸಾಗುವಳಿಯನ್ನ ಸಕ್ರಮ ಮಾಡಿದ್ದ ತಾಲೂಕು ಆಡಳಿತ ಯೂ ಟರ್ನ್
-ರೈತರು ಜಮೀನಿಗೆ ಕಾಲಿಡದಂತೆ ನೂರಾರು ಪೊಲೀಸರಿಂದ ಪಹರೆ

ರಾಯಚೂರು: ಮಾನ್ವಿ ತಾಲೂಕಿನ ಕಾಚಾಪುರ ಗ್ರಾಮದ ಅರಣ್ಯ ಭೂಮಿ ಸಾಗುವಳಿದಾರರು ಭೂ ದಾಖಲೆಗಳಿದ್ರೂ ಅಕ್ಷರಶಃ ಈಗ ಬೀದಿಗೆ ಬಂದಿದ್ದಾರೆ. ಮೂರು ತಲೆಮಾರಿನಿಂದ ಉಳುಮೆ ಮಾಡಿಕೊಂಡು ಬಂದ ಭೂಮಿ ಈಗ ಅವರದ್ದಲ್ಲ. ಸರ್ಕಾರವೇ ಉಳುಮೆಗೆ ಅನುಮತಿ ಕೊಟ್ಟು ಈಗ ಕಿತ್ತುಕೊಂಡಿದೆ. ರೈತರು ಜಮೀನಿಗೆ ಕಾಲಿಡದಂತೆ ಕಾಯಲಿಕ್ಕೆ ಗ್ರಾಮದಲ್ಲಿ ನೂರಾರು ಜನ ಪೊಲೀಸರನ್ನ ನೇಮಿಸಲಾಗಿದೆ.

1991 ರಲ್ಲಿ ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನ ಇವರ ಹೆಸರಿಗೆ ಅಂದಿನ ಮಾನ್ವಿ ತಹಶೀಲ್ದಾರ್ ಪಟ್ಟಾಮಾಡಿಕೊಟ್ಟಿದ್ದಾರೆ. ಅನಧಿಕೃತ ಸಾಗುವಳಿಯನ್ನ ಸಕ್ರಮಗೊಳಿಸಲು ಸಲ್ಲಿಸಿದ್ದ ಅರ್ಜಿಗೆ ತಾತ್ಕಾಲಿಕ ಮಂಜೂರಾತಿ ಆದೇಶವನ್ನ ನೀಡಲಾಗಿದೆ. ಪ್ರತಿಯೊಬ್ಬರಿಂದ 612 ರೂ. ಶುಲ್ಕ ಕಟ್ಟಿಸಿಕೊಂಡು 45 ಜನರಿಗೆ ಎರಡು ಎಕರೆ ಜಮೀನು ಉಳುಮೆ ಮಾಡಲು ಅನುಮತಿ ನೀಡಲಾಗಿದೆ. ಆದ್ರೆ ಈಗ ರಾಯಚೂರು ವಿಭಾಗ ಸಹಾಯಕ ಆಯುಕ್ತರು ರೈತರು ಜಮೀನಿಗೆ ಕಾಲಿಡದಂತೆ ಪೊಲೀಸ್ ಭದ್ರತೆ ಹಾಕಿಸಿದ್ದಾರೆ. ಸುಮಾರು 90 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ಸಾಗುವಳಿದಾರರು ಈಗ ಬೇರೆ ದಾರಿಯಿಲ್ಲದೆ ಕಂಗಾಲಾಗಿದ್ದಾರೆ..

ಸುಮಾರು 200 ಕುಟುಂಬಗಳಿರುವ ಕಾಚಾಪುರ ಗ್ರಾಮದಲ್ಲಿ 45 ಕುಟುಂಬಗಳು ಈ ಜಮೀನನ್ನೇ ನಂಬಿಕೊಂಡು ಬದುಕುತ್ತಿದ್ದವು. ಆದ್ರೆ 2012 ರಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಳುಮೆ ಮಾಡದಿರುವಂತೆ ಒತ್ತಡ ಹೇರುತ್ತಾ ಬಂದಿದ್ದಾರೆ. ಬದುಕಲು ಬೇರೆ ಮೂಲಗಳಿಲ್ಲದೆ ಸಾಗುವಳಿದಾರರು ಉಳುಮೆ ಮಾಡುತ್ತಿದ್ದರು. ಸರ್ಕಾರ ಸ್ಪಂದಿಸದಿದ್ದರೆ ಆತ್ಮಹತ್ಯೆಯೊಂದೇ ದಾರಿ ಅಂತ ರೈತರು ಎಚ್ಚರಿಸಿದ್ದಾರೆ. ಆದ್ರೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅರಣ್ಯ ಭೂಮಿ ಅಕ್ರಮ ಪರಭಾರೆ ಮಾಡಲು ಬಿಡುವುದಿಲ್ಲ ಅಂತ ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಮೀನನ್ನ ಮರಳಿ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ ಉಳಿದವರನ್ನ ಜಮೀನಿಗೆ ಕಾಲಿಡದಂತೆ ಎಚ್ಚರಿಸಿದೆ. ಅಲ್ಪಸಂಖ್ಯಾತರು, ಇತರೆ ಹಿಂದುಳಿದ ವರ್ಗದವರು ನಮಗೂ ಉಳುಮೆಗೆ ಅವಕಾಶ ಕೊಡಿ ಅಂತ ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ. ಕೂಡಲೇ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

 

Comments

Leave a Reply

Your email address will not be published. Required fields are marked *