ಇತ್ತ ಸಾಲಮನ್ನಾ ಚಿಂತೆಯಲ್ಲಿ ಸಿಎಂ- ಅತ್ತ ಸರ್ಕಾರಿ ದುಡ್ಡಲ್ಲಿ ಅಧಿಕಾರಿಗಳಿಂದ ಜಾಲಿ ಟ್ರಿಪ್!

ಬೆಂಗಳೂರು: ರೈತರ ಸಾಲಮನ್ನಾ ಮಾಡೋದು ಹೇಗಪ್ಪ ಎಂದು ಸಿಎಂ ಕುಮಾರಸ್ವಾಮಿಯವರು ತಲೆಕೆಡಿಸಿಕೊಂಡಿದ್ದರೆ, ಅತ್ತ ಹಾಪ್‍ಕಾಮ್ಸ್ ಮಂಡಳಿ ಅಧಿಕಾರಿಗಳು ಸರ್ಕಾರಿ ದುಡ್ಡಲ್ಲಿ ವಿದೇಶಿ ಟ್ರಿಪ್‍ಗೆ ಸಜ್ಜಾಗುತ್ತಿದ್ದಾರೆ.

ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ಹಾಪ್ ಕಾಮ್ಸ್ ಅಧಿಕಾರಿಗಳು ಜಾಲಿಟ್ರಿಪ್ ಕೈಗೊಂಡಿದ್ದಾರೆ. ಹಾಪ್‍ಕಾಮ್ಸ್ ನ 16 ಮಂದಿ ನಿರ್ದೇಶಕರುಗಳು ಅಂಡಮಾನ್-ನಿಕೋಬರ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಜೂನ್ 30 ರಿಂದ ಜುಲೈ 4 ವರೆಗೆ ಒಟ್ಟು 5 ದಿನಗಳ ಕಾಲ ಪ್ರವಾಸಕ್ಕೆ ಯೋಜನೆ ಸಿದ್ಧಗೊಂಡಿದೆ. ಈಗಾಗಲೇ ಮಂಡಳಿ ಕಡೆಯಿಂದ ಟೆಂಡರ್ ಕರೆಯಲಾಗಿದ್ದು, ಟೆಂಡರ್‍ನಲ್ಲಿ ವಿಮಾನಯಾನ, ಊಟೋಪಚಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒಳಗೊಂಡ ಪ್ಯಾಕೇಜ್ ಸಲ್ಲಿಸುವಂತೆ ಜಾಹೀರಾತು ನೀಡಿದೆ. ಪ್ರವಾಸಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಾಲಿದ್ದು, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಾಹನ, ವಿಮಾನ, ವಸತಿ, ಬೆಂಗಾವಲು ಪಡೆಗೆ ಸಿಎಂ ಬ್ರೇಕ್

ಒಂದು ಕಡೆ ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಕುರಿತು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೇ ಹಲವು ದುಂದುವೆಚ್ಚಕ್ಕೆ ಸ್ವತಃ ತಾವೇ ಕಡಿವಾಣ ಹಾಕಿದ್ದರೂ, ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಪ್ರವಾಸದ ಹೆಸರಲ್ಲಿ ಜಾಲಿಟ್ರಿಪ್ ಕೈಗೊಂಡಿರುವುದು ಶೋಚನಿಯ ಸಂಗತಿಯಾಗಿದೆ.

ಅಧಿಕಾರಿಗಳ ಈ ಜಾಲಿಟ್ರಿಪ್‍ಗೆ ಅಸಮಾಧಾನ ಹೊರಹಾಕಿರುವ ಸಾರ್ವಜನಿಕರು, ಅಧ್ಯಯನದ ಹೆಸರಲ್ಲಿ ಅಂಡಮಾನ್-ನಿಕೋಬರ್‍ಗೆ ಹೋಗಬೇಕಾ? ಸಾಲಮನ್ನಾ ಬಗ್ಗೆ ತಲೆಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಹಾಗೂ ತೋಟಗಾರಿಕಾ ಸಚಿವರಿಗೆ ಅಧಿಕಾರಿಗಳ ದುಂದುವೆಚ್ಚ ಕಾಣಿಸುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *