ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆ ಏನಾಗುತ್ತದೆ ಅನ್ನೋ ಅರಿವು ಕೇಂದ್ರಕ್ಕೆ ಗೊತ್ತಿರಲಿಲ್ಲ!

ನವದೆಹಲಿ: ನೋಟು ನಿಷೇಧದಿಂದ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಅರಿವನ್ನು ಕೇಂದ್ರ ಸರ್ಕಾರ ಹೊಂದಿರಲಿಲ್ಲ ಎನ್ನುವ ಅಂಶ ಈಗ ಬಹಿರಂಗಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು ರೂ.500 ಹಾಗೂ 1,000 ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಕಾಸರಗೋಡು ಕ್ಷೇತ್ರದ ಸಿಪಿಐ ಸಂಸದ ಪಿ.ಕರುಣಾಕರನ್ ಹಾಗೂ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ತೇಜ್ ಪ್ರತಾಪ್ ಯಾದವ್, ನೋಟು ನಿಷೇಧ ಯಾವ ರೀತಿ ಅರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಕೇಂದ್ರ ಯೋಚಿಸಿತ್ತೆ ಎಂದು ಪ್ರಶ್ನಿಸಿದ್ದರು.

 

ಇದಕ್ಕೆ ಉತ್ತರಿಸಿದ್ದ ಕೇಂದ್ರ ವಿತ್ತ ಸಚಿವಾಲಯದ ಸಹಾಯಕ ಸಚಿವ ರಾಧಾಕೃಷ್ಣನ್, ನೋಟು ನಿಷೇಧದ ಬಳಿಕ ಭಾರತದ ಅರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಮೌಲ್ಯಮಾಪನ ಮಾಡಿರಲಿಲ್ಲವೆಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲಾಗಿತ್ತೆ? ಅದರಿಂದ ಏನೇನು ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಪರಿಶೀಲನೆ ಮಾಡಿತ್ತೆ? ಎಂಬ ಪ್ರಶ್ನೆಗೆ ರಾಧಾಕೃಷ್ಣನ್ `ಇಲ್ಲ’ ಎಂದು ಉತ್ತರಿಸಿದ್ದಾರೆ.

ಕೇವಲ ಕಪ್ಪುಹಣ ಮತ್ತು ಕಳ್ಳ ನೋಟುಗಳಿಗೆ ಕಡಿವಾಣ ಹಾಕಲು ನೋಟು ನಿಷೇಧಕ್ಕೆ ಮುಂದಾದ ಕ್ರಮಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಮ್ಮತಿ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರಿಸಲು ನಿರಾಕರಿಸಿದ್ದಾರೆ.

ಮೋದಿ ಸರಕಾರದ ನಿರ್ಧಾರದಿಂದ ಚಲಾವಣೆಯಲ್ಲಿದ್ದ ಶೇ.85ರಷ್ಟು ಕರೆನ್ಸಿ ತನ್ನ ಮೌಲ್ಯ ಕಳೆದುಕೊಂಡಿತ್ತು. ಆದರೆ ಶೇ.99.3 ರಷ್ಟು ಅಪಮೌಲ್ಯಗೊಂಡ ಕರೆನ್ಸಿ ಭಾರತೀಯ ರಿಸರ್ವ್ ಬ್ಯಾಂಕ್‍ಗೆ ವಾಪಾಸಾಗಿತ್ತು. ನೋಟು ನಿಷೇಧಗೊಂಡ ಬಳಿಕ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿದ್ದರೆ ನಂತರದ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಕಾಣಿಸಿತ್ತು. ಈ ಜಿಡಿಪಿ ಬೆಳವಣಿಗೆಗೆ ನೋಟು ನಿಷೇಧವೂ ಒಂದು ಕಾರಣ ಎಂದು ಹೇಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ.

ವೆಂಕಯ್ಯ ನಾಯ್ಡು ಶ್ಲಾಘನೆ: ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಿಂದ ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ಎಲ್ಲೆಲ್ಲೋ ಅಡಗಿಸಿಟ್ಟ ಕಳ್ಳ ಹಣಗಳ ಲೆಕ್ಕ ಗೊತ್ತಾಗಿದೆ. ಹಣಗಳು ಮರಳಿ ಬ್ಯಾಂಕಿಗ್ ಬಂದಿದೆ. ವಿಶ್ವದ ಆರ್ಥಿಕತೆ ಈಗ ಕುಸಿಯುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *