ಅಪ್ಪ ಸೋಲ್ತಾನೆ, ಮಗ ಸೋಲ್ತಾನೆ ಅಂತ ಸಿಎಂ ಅಳ್ತಾರೆ: ಗೋವಿಂದ ಕಾರಜೋಳ

– ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೊಮ್ಮೆ ಸಿಎಂ ಆಗಲ್ಲ

ಹುಬ್ಬಳ್ಳಿ: ಅಪ್ಪ ಸೋಲುತ್ತಾನೋ, ಮಗ ಸೋಲುತ್ತಾನೋ ಅಂತ ಸಿಎಂ ಕುಮಾರಸ್ವಾಮಿ ಅಳುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವರು, ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮೇಲೆ ಆಣೆ ಮಾಡಿ, ರೈತರ ಸಾಲಮನ್ನಾ ಎಷ್ಟು ಆಗಿದೆ ಅಂತ ಹೇಳಲಿ. ಜೆಡಿಎಸ್ ಮತ್ತು ಕಾಂಗ್ರೆಸ್ ಸಂಬಂಧ ಬಹಳ ದಿನ ಇರಲ್ಲ. ಪರಸ್ಪರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಒಂದು ಮತ ಎಸ್.ಐ.ಚಿಕ್ಕನಗೌಡರ್ ಅವರನ್ನು ಶಾಸಕರನ್ನಾಗಿ ಮಾಡುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಮಾಡುತ್ತದೆ ಎಂದು ಮತ ಯಾಚಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸುಳ್ಳು ಭಾಷಣ, ಪೊಳ್ಳು ಭರವಸೆ ಕೊಡುವುದೇ ಸಾಧನೆ ಮಾಡಿಕೊಂಡಿದ್ದರು. ಅನ್ನಭಾಗ್ಯ ಹೆಸರಲ್ಲಿ ಮೋಸದ ಕೆಲಸ ಮಾಡಿದ್ದಾರೆ. ಇಂದು ಕೇಂದ್ರ ಸರ್ಕಾರದ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಕಿ ನೀಡುತ್ತಿದ್ದರು. ರಾಜ್ಯ ಸರ್ಕಾರದಿಂದ ಕೇವಲ ಸಿದ್ದರಾಮಯ್ಯ ಅವರ ಭಾವಚಿತ್ರದ ಖಾಲಿ ಚೀಲ ಸಿಗುತ್ತಿತ್ತು. ಸಿದ್ದರಾಮಯ್ಯ ಅವರು ಈ ಜನ್ಮದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *