ಸಾಮಾಜಿಕ ನ್ಯಾಯದ ಪರ ಇರೋದಕ್ಕೆ ನನ್ನ ವಿರುದ್ಧ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

ಬೆಂಗಳೂರು: ನಾನು ಸಾಮಾಜಿಕ ನ್ಯಾಯದ ಪರವಾಗಿ ಇದ್ದೇನೆ ಅಂತ ಸಹಿಸಲು ಬಿಜೆಪಿಯವರಿಗೆ (BJP) ಆಗ್ತಿಲ್ಲ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಎಂದು ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೆ ಕಿಡಿಕಾರಿದ್ದಾರೆ.

ಮಾಜಿ ಸಿಎಂ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ದೇವರಾಜ್ ಅವರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೆಲಸ ಮಾಡ್ತಿದ್ದೇನೆ. ಬಡವರ ಪರ ಇದ್ದೇನೆ. ಇದೆಲ್ಲವನ್ನೂ ಮಾಡ್ತಿದ್ದೇನೆ ಅಂತ ಬಿಜೆಪಿ ಅವರಿಗೆ ನನ್ನ ಮೇಲೆ ಕೋಪ. ಅದಕ್ಕೆ ಸಿದ್ದರಾಮಯ್ಯರನ್ನ ಹೇಗಾದ್ರು ಮಾಡಿ ಮುಗಿಸಬೇಕು ಎಂದು ಹುನ್ನಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡೋ ಪ್ರಯತ್ನ ಮಾಡ್ತಿದ್ದಾರೆ. ನಾನು ಏನು ತಪ್ಪು ಮಾಡಿದೇ ಹೋದರು ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂತ ಮಾತಾಡ್ತಿದ್ದಾರೆ. ಅದಕ್ಕೆ ಕೆಲವರು ತಮಟೆ ಹೊಡೆಯುತ್ತಿದ್ದಾರೆ‌. ಇದು ನನ್ನ ವಿರುದ್ದ ಮಾಡ್ತಿರೋ ಷಡ್ಯಂತ್ರ. ಇಂತಹ ಷಡ್ಯಂತ್ರಗಳನ್ನ ನಾವೆಲ್ಲ ಒಂದಾಗಿ ವಿರೋಧ ಮಾಡಬೇಕು. ಇಲ್ಲದೆ ಹೋದರೆ ನ್ಯಾಯ ಸಿಗೊಲ್ಲ ಎಂದು ಜನರಿಗೆ ಕರೆ ನೀಡಿದರು.

ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಸಾಮಾಜಿಕ ‌ನ್ಯಾಯದ ಪರ‌ ಕೆಲಸ ಮಾಡಿದ್ದರು. ಇಬ್ಬರ ಹಾದಿಯಲ್ಲಿ ನಡೆಯೋ ಪ್ರಯತ್ನ ಮಾಡ್ತಿದ್ದೇನೆ‌. ಅಧಿಕಾರ ಇರಲಿ ಇರದೇ ಹೋಗಲಿ ಸಾಮಾಜಿಕ ನ್ಯಾಯದಲ್ಲಿ ನಾನು ರಾಜೀ ಆಗೊಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.