ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

ನವದೆಹಲಿ: ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಪ್ರಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಸರ್ಕಾರದ ಬಳಿ ಕೃಷಿಗೆ ತೆರಿಗೆ ವಿಧಿಸುವ ಯಾವುದೇ ಯೋಜನೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೃಷಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಸರ್ಕಾರದಲ್ಲಿ ಇಲ್ಲ. ಕೃಷಿ ವಲಯ ಈಗ ಸಂಕಷ್ಟದಲ್ಲಿದೆ. ಹೀಗಾಗಿ ತೆರಿಗೆ ವಿಧಿಸಬೇಕೇ ಎನ್ನುವ ಬಗ್ಗೆ ಯಾವುದೇ ಪ್ರಶ್ನೆಯೇ ಉದ್ಭಸುವುದಿಲ್ಲ ಎಂದು ಹೇಳಿದರು.

ಈಗಾಗಲೇ ನಾನು ಈ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಶ್ರೀಮಂತ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ನಾವು ಈಗ ಕೃಷಿಯನ್ನು ಬೆಂಬಲಿಸಬೇಕು. ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಇದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಯಾವೊಂದು ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಲಾರದು ಎಂದು ತಿಳಿಸಿದರು.

ಚರ್ಚೆಗೆ ಕಾರಣ ಏನು?
ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‍ರಾಯ್ ಈ ಹಿಂದೆ, ಕೃಷಿ ಆದಾಯಕ್ಕೆ ವಿನಾಯಿತಿ ಇರುವುದರಿಂದ ತೆರಿಗೆ ಕಳ್ಳರು ದುರುಪಯೋಗ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಒಂದು ಮಿತಿಯ ಬಳಿಕ ಕೃಷಿಯಿಂದ ಬರುವ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಅಷ್ಟೇ ಅಲ್ಲದೇ ವೈಯಕ್ತಿಕ ಆದಾಯ ತೆರಿಗೆಯಲ್ಲಿರುವ ಎಲ್ಲ ವಿನಾಯಿತಿಗಳನ್ನೂ ತೆಗೆದು ಹಾಕಬೇಕೆಂದು ಹೇಳಿದ್ದರು. ಇವರ ಹೇಳಿಕೆಯಿಂದಾಗಿ ಸರ್ಕಾರ ಕೃಷಿಗೆ ತೆರಿಗೆ ವಿಧಿಸುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

Comments

Leave a Reply

Your email address will not be published. Required fields are marked *