ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸಲ್ಲ – ನಿತಿನ್ ಗಡ್ಕರಿ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

59ನೇ ವಾರ್ಷಿಕ ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‍ಐಎಎಂ) ಸಮಾವೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ನಿಷೇಧದ ಕುರಿತು ಸ್ಪಷ್ಟಪಡಿಸಿದ ಅವರು, ಭಾರತದ ವಾಹನ ಉದ್ಯಮವು ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡುತ್ತಿರುವ ಕೊಡುಗೆ ಅಪಾರ, ಈ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ರಫ್ತು ಹೆಚ್ಚಿರುವುದಕ್ಕೆ ವಾಹನ ಉದ್ಯಮವೇ ಸಾಕ್ಷಿ ಎಂದು ಗಡ್ಕರಿ ಅಭಿಪ್ರಾಯ ಪಟ್ಟರು.

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಗಳನ್ನು ನಿಷೇಧಿಸುವ ಕುರಿತ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆಟೋಮೊಬೈಲ್ ವಲಯ ಸಾಕಷ್ಟು ಉದ್ಯೋಗ ಒದಗಿಸುತ್ತಿದ್ದು, ಮಾತ್ರವಲ್ಲದೆ ರಫ್ತು ಹೆಚ್ಚಿದೆ. ಆದರೆ, ಇದರಿಂದ ಸರ್ಕಾರ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೇಯದು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚ, ಎರಡನೇಯದು ಮಾಲಿನ್ಯ, ಮೂರನೇಯದು ರಸ್ತೆ ಸುರಕ್ಷತೆ ಎಂದು ತಿಳಿಸಿದರು.

ದೇಶದಲ್ಲಿ ಆಟೋಮೊಬೈಲ್ ಉದ್ಯಮ 4.50 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದರ ಜೊತೆಗೆ ಮಾಲಿನ್ಯವು ದೇಶಕ್ಕೆ ಒಂದು ಪ್ರಮುಖ ವಿಷಯವಾಗಿ ಉಳಿದಿರುವುದರಿಂದ ಶುದ್ಧ ಇಂಧನ ಮೂಲಗಳತ್ತ ಮುಖ ಮಾಡಬೇಕಿದೆ. ಮಾಲಿನ್ಯದ ಸಮಸ್ಯೆಗೆ ವಾಹನಗಳನ್ನು ಮಾತ್ರ ದೂಷಿಸುವುದು ನ್ಯಾಯವಲ್ಲ. ಆದರೆ, ಅವರೂ ಸಹ ಕೆಲವು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ದೆಹಲಿ ವಿಶ್ವದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರಗಳಲ್ಲಿ ಒಂದು. ಅಲ್ಲದೆ, 2018ರಲ್ಲಿ ಹೆಚ್ಚು ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ 50 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶೇ.29ರಷ್ಟು ಮಾಲಿನ್ಯವನ್ನು ನಿಯಂತ್ರಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ಗಡ್ಕರಿ ತಿಳಿಸಿದರು.

ಈ ಹಿಂದೆ ನಡೆದ ನೀತಿ ಆಯೋಗದ ಸಭೆಯಲ್ಲಿ 2025ರ ವೇಳೆಗೆ ಎಲ್ಲ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್ ಆಗಿ ಪರಿವರ್ತಿಸಲಾಗುವುದು ಎದು ನಿರ್ಧರಿಸಲಾಗಿತ್ತು.

ನೀತಿ ಆಯೋಗದ `ಥಿಂಕ್ ಟ್ಯಾಂಕ್’ ಸಭೆಯಲ್ಲಿ ಈ ನಿರ್ಧಾರದ ಕುರಿತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು ಹಾಗೂ ಸ್ಟಾರ್ಟ್ ಅಪ್ ತಯಾರಿಕರೊಂದಿಗೆ ಚರ್ಚಿಸಲಾಗಿತ್ತು. ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎಂದು ಕಂಪನಿಗಳಿಗೆ ನೀತಿ ಆಯೋಗದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಇದಕ್ಕೆ ಹಲವು ಆಟೋಮೊಬೈಲ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಸೂಕ್ತ ನೀತಿ ಮತ್ತು ಮಾರ್ಗದರ್ಶನವಿಲ್ಲದೆ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ನೀತಿಗಳನ್ನು ಸ್ಪಷ್ಟವಾಗಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದವು. ಇದಕ್ಕೆ ಪ್ರತಿಯಾಗಿ, ಹೆಚ್ಚು ವಾಯು ಮಾಲಿನ್ಯ ಹೊಂದಿದ 15ರ ಪೈಕಿ 14 ನಗರಗಳು ಭಾರತದಲ್ಲಿವೆ. ಸರ್ಕಾರ ಮತ್ತು ಕಂಪನಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದರು.

2023ರ ವೇಳೆಗೆ ತ್ರಿಚಕ್ರ ವಾಹನಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್‍ಗೆ ಪರಿವರ್ತಿಸಬೇಕು, 2025ರ ವೇಳೆಗೆ 150 ಸಿಸಿಗಿಂತ ಕಡಿಮೆ ಎಂಜಿನ್ ಸಾಮಥ್ರ್ಯ ಹೊಂದಿರುವ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‍ಗೆ ಪರಿವರ್ತಿಸಲು ನೀತಿ ಆಯೋಗ ಯೋಜನೆ ರೂಪಿಸಿದೆ.

Comments

Leave a Reply

Your email address will not be published. Required fields are marked *