ಬೆಂಗ್ಳೂರು ಉತ್ಸವ ಆಚರಿಸಲು ಸರ್ಕಾರ ನಿರ್ಧಾರ: ಸಿಟಿ ರವಿ

ಬೆಂಗಳೂರು: ಐಟಿ-ಬಿಟಿ ಸಿಟಿ, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಹೀಗೆ ನಾನಾ ಹೆಸರಿನಿಂದ ಪ್ರಖ್ಯಾತ ಹೊಂದಿರುವ ಬೆಂಗಳೂರಿಗೆ ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಇದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಸಾಂಸ್ಕೃತಿಕ ಇತಿಹಾಸಕ್ಕೆ ಕೊರತೆ ಇಲ್ಲ. ಈ ಬೆಂಗಳೂರು ಇತಿಹಾಸವನ್ನು ವೈಭವದಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ರಾಷ್ಟ್ರೀಯ ಮಟ್ಟದ ಬೆಂಗಳೂರು ಉತ್ಸವ ಆಚರಣೆಗೆ ಸರ್ಕಾರ ಚಿಂತನೆ ನಡೆಸಿದೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಬೆಂಗಳೂರು ಉತ್ಸವ ಮಾಹಿತಿ ಬಿಚ್ಚಿಟ್ಟರು. ವಿಶ್ವವಿಖ್ಯಾತ ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಬೆಂಗಳೂರು ಉತ್ಸವವನ್ನ ರಾಷ್ಟ್ರೀಯ ಉತ್ಸವವಾಗಿ ಆಚರಣೆ ಮಾಡೋಕೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ನಡೆದಿದೆ. ಸಿಎಂ ಯಡಿಯೂರಪ್ಪರವರ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡೋದಾಗಿ ಸಚಿವ ಸಿಟಿ ರವಿ ತಿಳಿಸಿದರು.

ಏನಿದು ಬೆಂಗಳೂರು ಉತ್ಸವ?:
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಬೆಂಗಳೂರು ಸ್ಥಾಪನೆಯ ಇತಿಹಾಸವೇ ಒಂದು ರೋಚಕ. ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಇತಿಹಾಸ ಇದೆ. ಈ ಇತಿಹಾಸವನ್ನ ಪ್ರಚಾರ ಮಾಡುವುದೇ ಬೆಂಗಳೂರು ಉತ್ಸವದ ಪ್ರಮುಖ ಉದ್ದೇಶ. ಇತಿಹಾಸ ಪ್ರಚಾರದ ಜೊತೆ ವಾಣಿಜ್ಯಾತ್ಮಕವಾಗಿ ಈ ಬೆಂಗಳೂರು ಉತ್ಸವವನ್ನ ಆಚರಣೆ ಮಾಡಲಾಗುತ್ತೆ. ಕಲೆ ಪರಂಪರೆ ಜೊತೆ ವಾಣಿಜ್ಯ ಚಟುವಟಿಕೆಗಳನ್ನ ಆಯೋಜನೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುವ ಹಾಗೇ ಮಾಡಲಾಗುತ್ತೆ.

ಬೆಂಗಳೂರು ವೈಭವದ ಇತಿಹಾಸ ನೆನಪಿಸೋ ಜೊತೆಗೆ ಜನರಿಗೆ ಅಗತ್ಯ ಮನೋರಂಜನೆಗಳನ್ನ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ಸವ ಆಚರಣೆ ಮಾಡಿ ಮತ್ತಷ್ಟು ಜನರನ್ನ ಬೆಂಗಳೂರಿಗೆ ಆಕರ್ಷಣೆ ಮಾಡೋದು ಸರ್ಕಾರದ ಉದ್ದೇಶ. ಬೆಂಗಳೂರು ಉತ್ಸವವನ್ನ ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡೋದ್ರೀಂದ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬೆಂಗಳೂರನ್ನ ಬೆಳೆಸಬಹುದು. ಜೊತೆಗೆ ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗೂ ಅನುಕೂಲ ಮಾಡೋದು ಕೂಡ ಸರ್ಕಾರದ ಉದ್ದೇಶವಾಗಿದೆ. ಉತ್ಸವದ ರೂಪುರೇಷೆಗಳನ್ನು ಇನ್ನೂ ಸಿದ್ಧಪಡಿಸಬೇಕಿದೆ. ಆದಷ್ಟು ಬೇಗ ಬೆಂಗಳೂರು ಉತ್ಸವದ ರೂಪುರೇಷೆ ಸಿದ್ಧಪಡಿಸಿ ಬೆಂಗಳೂರು ಉತ್ಸವ ಆಚರಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.

Comments

Leave a Reply

Your email address will not be published. Required fields are marked *