ನಮ್ಮದು ಪೇಪರ್‌ನಲ್ಲಿ ಇರೋ ಯೋಜನೆಯಲ್ಲ – ಕಿಸಾನ್ ಸಮ್ಮಾನ್ ಯೋಜನೆ ಪ್ರಧಾನಿ ಮೋದಿ ಚಾಲನೆ

– ಮೊದಲ ಹಂತದಲ್ಲಿ 1 ಕೋಟಿ ರೈತರ ಖಾತೆಗೆ ತಲಾ 2 ಸಾವಿರ ಜಮೆ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಕ್‍ಪುರ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ್ದಾರೆ.

ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಹಿಂದಿನ ಸರ್ಕಾರದ ಯೋಜನೆಗಳು ಕೇವಲ ಪೇಪರ್‍ನಲ್ಲಿ ಮಾತ್ರ ಇತ್ತು. ಆದರೆ ನಮ್ಮ ಸರ್ಕಾರಲ್ಲಿ ಯಾವೆಲ್ಲ ಯೋಜನೆಗಳನ್ನು ಘೋಷಿಸಿದ್ದೇವೋ ಆ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ ಎಂದು ಹೇಳಿದರು.

ಇದು ಕೇವಲ ಆರಂಭವಷ್ಟೇ. ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು 75 ಸಾವಿರ ಕೋಟಿ ರೂ.ವನ್ನು ಮಿಸಲಿಡಲಾಗುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪಾತ್ರವಿರುವುದಿಲ್ಲ. ಇದು ನಿಮ್ಮ ಹಣ. ಇದನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ರೈತರ ಬಗ್ಗೆ ಹಗುರವಾಗಿ ಮಾತನಾಡುವವರು ರಾಜಕೀಯ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಾರೆ. ಯೋಜನೆಯಲ್ಲಿ ರಾಜಕೀಯ ತಂತ್ರವಿದೆ ಎನ್ನುವವರ ಮಾತಿಗೆ ಕಿವಿ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡಿಕೊಂಡ ಮೋದಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ವಿರುದ್ಧ ಮಾತನಾಡಿದ್ದ ನಾಯಕರಿಗೆ ಟಾಂಗ್ ಕೊಟ್ಟರು.

ಈ ಯೋಜನೆಯಿಂದಾಗಿ ದೇಶದ ಒಂದು ಕೋಟಿ ರೈತರ ಖಾತೆಗೆ ಇಂದು 2 ಸಾವಿರ ರೂ. ಪಾವತಿಯಾಗಲಿದೆ. ಜೊತೆಗೆ ಮುಂದಿನ ಎರಡು-ಮೂರು ದಿನಗಳಲ್ಲಿ ಮತ್ತೆ ಒಂದು ಕೋಟಿ ರೈತರ ಖಾತೆಗೆ ಹಣ ಪಾವತಿಯಾಗುತ್ತದೆ. ಈ ಮೂಲಕ ಒಟ್ಟು 12 ಕೋಟಿ ಸಣ್ಣ ಹಿಡುವಳಿದಾರ ರೈತರ ಖಾತೆಗೆ 2 ಸಾವಿರದಂತೆ ಮೂರು ಕಂತು (6,000 ರೂ.) ಪಾವತಿಯಾಗಲಿದೆ.

ಏನಿದು ಯೋಜನೆ?:
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಅರ್ಹತೆಗಳು ಏನು?
2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?
ಪಿಎಂ-ಕಿಸಾನ್ ಯೋಜನೆಗೆಂದು ಕೇಂದ್ರ ಸರ್ಕಾರ pmkisan.nic.in ವೆಬ್‍ಸೈಟ್ ತೆರೆದಿದೆ. ಈ ಯೋಜನೆಗೆ ಅರ್ಹತೆ ಪಡೆದ ರೈತರು ಈ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಪಿಎಂ-ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು. ಆನ್‍ಲೈನ್ ಮೂಲಕ ಈ ವೆಬ್‍ಸೈಟ್ ನಲ್ಲಿ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ರೈತರು ತಮ್ಮ ಹೆಸರನ್ನು ಹಾಗೂ ವಿವರಗಳನ್ನು ನೊಂದಾಯಿಸಲು ಫೆಬ್ರವರಿ 25 ಕೊನೆಯ ದಿನಾಂಕವಾಗಿದೆ.

ಯಾವ ದಾಖಲೆಗಳು ಬೇಕು?:
ಸರ್ಕಾರದಿಂದ ಅನುಮೋದಿಸಿದ ಐಡಿ ಪುರಾವೆಗಳು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ, ಕೃಷಿ ಭೂವಿಯ ದಾಖಲೆಗಳು ರೈತರ ಬಳಿ ಇರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.

ಈ ಯೋಜನೆಯಲ್ಲಿ ಗ್ರಾಮೀಣ ಕೃಷಿ ಭೂಮಿ ಅಥವಾ ನಗರ ಕೃಷಿ ಭೂಮಿಯೆಂದು ತಾರತಮ್ಯ ಮಾಡುವುದಿಲ್ಲ. ಗ್ರಾಮೀಣ ಹಾಗೂ ನಗರ ವ್ಯಾಪ್ತಿಗೆ ಬರುವ ಎರಡು ಕೃಷಿ ಭೂಮಿಗಳ ರೈತರು ಈ ಯೋಜನೆಗೆ ಅರ್ಹರು. ನಗರದಲ್ಲಿರುವ ಕೃಷಿ ಭೂಮಿಯನ್ನು ಪ್ರಸ್ತುತ ಈಗ ಕೃಷಿಗೆ ಚಟುವಟಿಕೆಗೆ ಬಳಸುತ್ತಿದ್ದರೆ ಮಾತ್ರ ಯೋಜನೆಯ ಫಲವನ್ನು ಪಡೆಯಬಹುದು.

ಎಷ್ಟು ಹಣ ಬರುತ್ತದೆ?
2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ 6 ಸಾವಿರ ರೂ. ಮೊತ್ತವನ್ನು 2 ಸಾವಿರ ರೂ. ನಂತೆ ಮೂರು ಕಂತುಗಳಲ್ಲಿ ಜಮೆ ಮಾಡುವ `ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಕರೆಯಲಾಗುವ ಯೋಜನೆಯನ್ನು ಹಣಕಾಸು ಸಚಿವ ಪಿಯೂಶ್ ಗೋಯಲ್ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದರು.

ಈ ಯೋಜನೆಯಿಂದ 12 ಕೋಟಿಯಷ್ಟು ಸಣ್ಣ ಮತ್ತು ಬಡರೈತರಿಗೆ ಪ್ರಯೋಜನವಾಗಲಿದ್ದು, 2019-20ರ ಸಾಲಿನಲ್ಲಿ ಸರ್ಕಾರಕ್ಕೆ 75 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಕೃಷಿ ಸಂಬಂಧಿ ಇತರ ಚಟುವಟಿಕೆಗಳಿಗೆ ಈ ಹಣ ನೆರವಾಗಲಿದೆ. ರೈತರು ಗೌರವಯುತ ಜೀವನ ಸಾಗಿಸಲು ಇದರಿಂದ ಸಾಧ್ಯವಾಗುತ್ತದೆ. 2018-19ರ ಸಾಲಿನಲ್ಲಿ ಪರಿಷ್ಕೃತ ಅಂದಾಜು ವಿಭಾಗದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ. 2018ರ ಡಿಸೆಂಬರ್ ಪೂರ್ವಾನ್ವಯದಂತೆ ಈ ಯೋಜನೆ ಜಾರಿಯಾಗಲಿದೆ ಎಂದು ಗೋಯಲ್ ತಿಳಿಸಿದ್ದರು.

ಚುನಾವಣೆಗೆ ಮೊದಲು ಬೀಳುತ್ತೆ ಹಣ:
ಲೋಕಸಭಾ ಚುನಾವಣೆಯ ಒಳಗಡೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4 ಸಾವಿರ ರೂ. ಜಮೆಯಾಗುವ ಸಾಧ್ಯತೆಯಿದೆ. ಈ ಯೋಜನೆ ಅನ್ವಯ ಮೊದಲ ಕಂತನ್ನು ಮಾರ್ಚ್ 31ರ ಒಳಗಡೆ ಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಇದರ ಜೊತೆಯಲ್ಲೇ ಎರಡನೇ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ಒಳಗಡೆ ಜಮೆ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಕೃಷಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ರೈತರ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *