ನಮ್ಮ ಆಹಾರ ಖಾರ, ಈಗ ಹೂಡಿಕೆಯೂ ಖಾರವಾಗಿದೆ: ಮೆಣಸಿನಕಾಯಿ ಚಿತ್ರ ಹಾಕಿ ಪ್ರಿಯಾಂಕ್‌ಗೆ ನಾರಾ ಲೋಕೇಶ್‌ ಟಾಂಗ್‌

– ಆಂಧ್ರದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದಿದ್ದ ಪ್ರಿಯಾಂಕ್‌
– ಕಿರಿಯ ರಾಜ್ಯದಲ್ಲಿ ಅತಿ ಹೆಚ್ಚು ಹೂಡಿಕೆ ಎಂದ ನಾರಾ ಲೋಕೇಶ್‌

ಹೈದರಾಬಾದ್‌: ಆಂಧ್ರದ ಆಹಾರ ಖಾರವಾಗಿದೆ ಎಂದು ಅವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಈಗ ಅವರಿಗೆ ಖಾರವಾಗಿವೆ ಎಂದು ತೋರುತ್ತದೆ. ನಮ್ಮ ನೆರೆಹೊರೆಯವರು ಈಗಾಗಲೇ ಅದರ ಘಾಟು ಅನುಭವಿಸುತ್ತಿದ್ದಾರೆ ಎಂದು ಮೆಣಸಿಕಾಯಿ ಇಮೋಜಿ ಹಾಕಿ ಕರ್ನಾಟಕಕ್ಕೆ ಆಂಧ್ರ ಐಟಿ ಸಚಿವ ನಾರಾ ಲೋಕೇಶ್‌ (Nara Lokesh) ಪ್ರಿಯಾಂಕ್‌ ಖರ್ಗೆ ಅವರಿಗೆ  ಟಾಂಗ್‌ ನೀಡಿದ್ದಾರೆ.

ಗೂಗಲ್‌ (Google) ವಿಶಾಖಪಟ್ಟಣದಲ್ಲಿ 1.3 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ (Karnataka) ಮತ್ತು ಆಂಧ್ರ ಮಧ್ಯೆ ಜಟಾಪಟಿ ನಡೆಯುತ್ತಿದೆ.

ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyanka Khrge) ಗೂಗಲ್‌ ಕಂಪನಿಗೆ ಆಂಧ್ರಪ್ರದೇಶ ನೀಡಿದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ ಬೆನ್ನಲ್ಲೇ ನಾರಾ ಲೋಕೇಶ್‌ ಈಗ ಎಕ್ಸ್‌ನಲ್ಲಿ ಟಾಂಗ್‌ ನೀಡಿ ಆಂಧ್ರಪ್ರದೇಶ ಬೆಳವಣಿಗೆ ಆಗುತ್ತಿದೆ. ಕಿರಿಯ ರಾಜ್ಯದಲ್ಲಿ ಅತಿ ಹೆಚ್ಚು ಹೂಡಿಕೆಯಾಗುತ್ತಿದೆ ಎಂದು ಬರೆದು ಎಲ್ಲಿಯೂ ಕರ್ನಾಟಕದ ಹೆಸರನ್ನು ಉಲ್ಲೇಖಿಸದೇ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕ್‌ ಹೇಳಿದ್ದೇನು?
ಆಂಧ್ರಪ್ರದೇಶವು ಗೂಗಲ್ ಕಂಪನಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. 22,000 ಕೋಟಿ ರೂ. ಪ್ರೋತ್ಸಾಹ ಧನ, ಭೂಮಿಗೆ 25% ಸಬ್ಸಿಡಿ, ನೀರಿನ ಶುಲ್ಕಕ್ಕೆ 25% ಸಬ್ಸಿಡಿ, ಉಚಿತ ವಿದ್ಯುತ್ ಮತ್ತು ರಾಜ್ಯ ಜಿಎಸ್‌ಟಿಯ 100% ಮರುಪಾವತಿಯನ್ನು ನೀಡುತ್ತಿದೆ. ಈ ಆರ್ಥಿಕ ವಿಪತ್ತನ್ನು ಭರಿಸಲು ಸಾಧ್ಯವೇ? ಕರ್ನಾಟಕ ಇದನ್ನು ಮಾಡಿದ್ದರೆ ರಾಜ್ಯವನ್ನು ದಿವಾಳಿಯತ್ತ ತಳ್ಳಿದ ಆರೋಪ ನಮ್ಮ ಮೇಲಿತ್ತು ಎಂದು ಪ್ರತಿಕ್ರಿಯಿಸಿದ್ದರು.

ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಸುವ ಗೂಗಲ್‌ನ 1.3 ಲಕ್ಷ ಕೋಟಿ ರೂ. ಹೂಡಿಕೆ ಕರ್ನಾಟಕದಿಂದ ಕೈ ತಪ್ಪಿ ಹೋಗಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತ್ತು. ವಿಪಕ್ಷಗಳ ಟೀಕೆಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಿಯಾಂಕ್‌ ಖರ್ಗೆ ಆಂಧ್ರ ಸರ್ಕಾರದ ಗೂಗಲ್ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ್ದರು. ಇದನ್ನೂ ಓದಿ:  Vizag ನಲ್ಲಿರುವ ‘G’ ಅಂದರೆ ಅದು ಗೂಗಲ್‌- ಅತಿ ಕಿರಿಯ ರಾಜ್ಯದಲ್ಲಿ ಹೆಚ್ಚು ಹೂಡಿಕೆ: ನಾಯ್ಡು ಸಂಭ್ರಮ

 

ನಾರಾ ಲೋಕೇಶ್‌ ಹೇಳಿದ್ದೇನು?
ಕರ್ನಾಟಕದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ವಿದ್ಯುತ್ ಕಡಿತವಿದೆ ಎಂದು ಹೇಳುತ್ತಾರೆ. ಕರ್ನಾಟಕ ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ನಾರಾ ಲೋಕೇಶ್ ಬುಧವಾರ ಹೇಳಿದ್ದರು.

ವಿಶಾಖಪಟ್ಟಣದಲ್ಲಿ ಗೂಗಲ್‌ ಎಐ ಕೇಂದ್ರ ತೆರೆಯುವ ಸಂಬಂಧ ಮಾಡಿಕೊಂಡ ಒಪ್ಪಂದಕ್ಕೆ ಕರ್ನಾಟದ ನಾಯಕರು ಪ್ರಶ್ನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಅವರು ಉತ್ತರ ನೀಡಿದರು.

ಕಂಪನಿಗಳನ್ನು ಸೆಳೆಯಲು ಅವರು ಅಸಮರ್ಥರಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಗೂಗಲ್‌ ಜೊತೆ ಸಹಿ ಹಾಕುವ ಒಂದು ದಿನದ ಮೊದಲು ಹಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವಂತೆ ಪ್ರಯತ್ನ ಮಾಡಿದ್ದವು. ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್‌ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ಏನೇನು ಸಮಸ್ಯೆಯಾಗಿತ್ತು ಅವುಗಳನ್ನು ನಾವು ಪರಿಹರಿಸಿಕೊಟ್ಟಿದ್ದೇವೆ ಎಂದರು.

ರಾಜ್ಯ ರಾಜ್ಯಗಳ ಮಧ್ಯೆ ಈ ರೀತಿಯ ಸ್ಪರ್ಧೆ ಇರಬೇಕು. ಸ್ಪರ್ಧೆ ಇದ್ದರೆ ಅಂತಿಮವಾಗಿ ಲಾಭ ಭಾರತಕ್ಕೆ ಆಗಲಿದೆ. ಕಂಪ್ಯೂಟರ್‌ ಕ್ರಾಂತಿಯಾಗುವ ಸಂದರ್ಭದಲ್ಲಿ ಹಲವು ಮಂದಿ ಕಂಪ್ಯೂಟರ್‌ ಆಹಾರ ನೀಡುತ್ತಾ ಎಂದು ಪ್ರಶ್ನಿಸಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಅಂದು ಕಂಪನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಹೈದರಾಬಾದ್‌ ಇಂದು ಟೆಕ್‌ ಸಿಟಿಯಾಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದು ತಿಳಿಸಿದರು.