ಗೂಗಲ್ ತೆಕ್ಕೆಗೆ ಬೆಂಗಳೂರಿನ ‘ವೇರ್ ಈಸ್ ಮೈ ಟ್ರೈನ್’ ಆ್ಯಪ್ ಕಂಪನಿ

ಬೆಂಗಳೂರು: ಭಾರತೀಯ ರೈಲುಗಳು ಈಗ ಎಲ್ಲಿ ಸಂಚರಿಸುತ್ತಿದೆ ಎನ್ನುವ ನಿಖರ ಮಾಹಿತಿಯನ್ನು ತಿಳಿಸುವ ‘ವೇರ್ ಈಸ್ ಮೈ ಟ್ರೈನ್’ ಅಪ್ಲಿಕೇಶನ್‍ನನ್ನು ಗೂಗಲ್ ಖರೀದಿಸಿದೆ.

ಟೆಕ್ ವಿಶ್ಲೇಷಕರ ಪ್ರಕಾರ, ಗೂಗಲ್ ಭಾರತದಲ್ಲಿ ಜನಪ್ರಿಯ ಹೊಂದುತ್ತಿರುವ ‘ವೇರ್ ಈಸ್ ಮೈ ಟ್ರೈನ್’ ಆ್ಯಪನ್ನು ಅಭಿವೃದ್ಧಿ ಪಡಿಸಿದ ಸಿಗ್ಮಯಿಡ್ ಕಂಪನಿಯನ್ನು ಅಂದಾಜು 40 ಮಿಲಿಯನ್ ಡಾಲರ್ (288 ಕೋಟಿ ರೂಪಾಯಿ) ಖರೀದಿಸುವ ಸಂಬಂಧ ಮಾತುಕತೆ ನಡೆಸಿತ್ತು. ಈಗ ಈ ಕಂಪನಿಯನ್ನು ಎಷ್ಟು ಕೋಟಿ ರೂ. ನೀಡಿ ಖರೀದಿಸಿದೆ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.

ಗೂಗಲ್ ಸಂಸ್ಥೆ ಖರೀದಿಸಿದ ಎರಡನೇ ಖರೀದಿ ಇದಾಗಿದ್ದು, ಇದಕ್ಕೂ ಮೊದಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿ ‘ಹಳ್ಳಿ ಲ್ಯಾಬ್ಸ್’ ಖರೀದಿಸಿತ್ತು.

ಏನಿದು `ವೇರ್ ಈಸ್ ಮೈ ಟ್ರೈನ್’ ಆ್ಯಪ್?
ಭಾರತೀಯ ರೈಲುಗಳ ಮಾಹಿತಿಯನ್ನು ಒಳಗೊಂಡಿರುವ ಈ ಆ್ಯಪ್, ಪ್ರಯಾಣಿಕರ ರೈಲು ಯಾವ ನಿಲ್ದಾಣದ ಬಳಿ ಇದೆ ಎಂದು ನಿಖರವಾಗಿ ಹೇಳುತ್ತದೆ. ಇಂಟರ್‍ನೆಟ್ ಸೌಲಭ್ಯವಿಲ್ಲದಿದ್ದರೂ, ಗ್ರಾಹಕರು ರೈಲಿನ ಸಂಪೂರ್ಣ ಮಾಹಿತಿಯನ್ನು ರೈಲಿನ ಒಳಗಡೆ ಕುಳಿತು ಪಡೆದುಕೊಳ್ಳಬಹುದು. ಈ ಆ್ಯಪ್ ಆಫ್‍ಲೈನ್ ಜಿಪಿಎಸ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಕಾರಣ ರೈಲು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಆ್ಯಪ್ ಭಾರತೀಯ ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ರೈಲುಗಳ ಮಾಹಿತಿಯನ್ನು ಒಳಗೊಂಡಿದೆ. ಪ್ರಯಾಣಿಕರು ಆ್ಯಪ್ ನಲ್ಲಿ ಕೇವಲ ತಮ್ಮ ರೈಲು ಸಂಖ್ಯೆಯನ್ನು ನಮೂದಿಸಿದರೆ, ರೈಲು ಯಾವ ಸ್ಟೇಷನ್ ನಲ್ಲಿದೆ? ಮುಂದಿನ ನಿಲ್ದಾಣ ಯಾವುದು? ಎಷ್ಟು ಸಮಯಕ್ಕೆ ಬರುತ್ತದೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

‘ವೇರ್ ಈಸ್ ಮೈ ಟ್ರೇನ್’ ಆ್ಯಪ್ ಇಂಗ್ಲೀಷ್, ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದ್ದು, ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ

ಗೂಗಲ್ ಪ್ಲೇ ಸ್ಟೋರ್ ನಿಂದ 2018ರಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಆಗಿರುವ ಆ್ಯಪ್ ಗಳ ಪೈಕಿ ವೇರ್ ಈಸ್ ಮೈ ಟ್ರೈನ್ ಸ್ಥಾನ ಪಡೆದುಕೊಂಡಿದ್ದು, ಇದೂವರೆಗೂ 50 ಲಕ್ಷಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *