ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

ನವದೆಹಲಿ: ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಡಿಹೆಚ್‍ಆರ್) ವಿಶ್ವಪ್ರಸಿದ್ಧ ‘ಟಾಯ್ ರೈಲ್ವೇ’ ಸೇವೆಯ ದರವನ್ನು ಕಡಿಮೆ ಮಾಡಲಾಗಿದೆ. ಆ ಮೂಲಕ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಲಾಗಿದೆ.

ಡಿಹೆಚ್‍ಆರ್ ಅಧಿಕಾರಿಗಳು ಕ್ವೀನ್ ಆಫ್ ಹಿಲ್ಸ್ ಡಾರ್ಜಿಲಿಂಗ್‍ನ ರೈಲು ಸೇವೆಯ ದರವನ್ನು 200 ರೂ. ವರೆಗೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅಧಿಕಾರಿಗಳು ಈ ಉಪಕ್ರಮವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿದೆ. ದರ ಇಳಿಕೆಯ ಬಗ್ಗೆ ಈಶಾನ್ಯ ಗಡಿ ರೈಲ್ವೆಯ ಕತಿಹಾರ್ ವಿಭಾಗದ ಎಡಿಆರ್‍ಎಂ ಸಂಜಯ್ ಚಿಲ್ವರ್ವಾರ್ ಮಾತನಾಡಿ, ಟಾಯ್ ರೈಲಿನ ಎಲ್ಲಾ ದರಗಳನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‍ಗೆ ಹೋಗುವ ರೈಲಿನಲ್ಲಿ ಚೇರ್ ಕಾರ್ ದರ ಈ ಹಿಂದೆ 1,600 ರೂ. ಗಳಷ್ಟಿತ್ತು. ಆದರೆ ಈಗ ಅದನ್ನು 1,400 ರೂ. ಗೆ ಇಳಿಸಲಾಗಿದೆ.

ಎಸಿ ಕೋಚ್ ದರವು ಈ ಹಿಂದೆ 1,720 ರೂ. ಗಳಿಷ್ಟಿತ್ತು. ಈಗ ಅದನ್ನು 1,500 ರೂ.ಗೆ ಇಳಿಸಲಾಗಿದೆ. ಅದೇ ರೀತಿ ಡಾರ್ಜಿಲಿಂಗ್-ಘೂಮ್-ಡಾರ್ಜಿಲಿಂಗ್ ನಡುವೆ ಸಂಚರಿಸುವ ಟಾಯ್ ರೈಲಿನ ಜಾಯ್ ರೈಡ್ ಸೇವೆಗಳಿಗೂ ದರ ಕಡಿತಗೊಳಿಸಲಾಗಿದೆ.

ಜಾಯ್ ರೈಡ್ ಸ್ಟೀಮ್ ಇಂಜಿನ್‍ನೊಂದಿಗೆ ಟಾಯ್ ರೈಲ್ವೇ ಜೊತೆಗೆ ವಿಸ್ಟಾಡೋಮ್ ಕೋಚ್‍ನ ದರವು ಈ ಹಿಂದೆ 1,600 ರೂ. ಇತ್ತು. ಈಗ 1,500 ರೂ.ಗೆ ಇಳಿಸಲಾಗಿದೆ. ಹೊಸದಾಗಿ ಇಳಿಕೆಯಾದ ಪರಿಷ್ಕೃತ ದರವನ್ನು ಮಾರ್ಚ್ 1 ರಿಂದ ಜಾರಿಗೆ ತರಲಾಗುವುದು ಎಂದು ಡಿಎಚ್‍ಆರ್ ಆಡಳಿತ ತಿಳಿಸಿದೆ.

ಟಾಯ್ ರೈಲಿನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಡಿಎಚ್‍ಆರ್ ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ ಬೇಸಿಗೆ ಉತ್ಸವವನ್ನು ಡಾರ್ಜಿಲಿಂಗ್ ಹಿಲ್ಸ್ ಪ್ರದೇಶಗಳಾದ ಸಿಲಿಗುರಿ ಜಂಕ್ಷನ್, ಕುರ್ಸಿಯಾಂಗ್ ಮತ್ತು ಡಾರ್ಜಿಲಿಂಗ್ (ಡಿಹೆಚ್‍ಆರ್) ನಿಲ್ದಾಣಗಳಲ್ಲಿ ಆಯೋಜಿಸಲಿದೆ ಎಂದು ಚಿಲ್ವರ್ವಾರ್ ಹೇಳಿದರು. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಿಹೆಚ್‍ಆರ್ ಅಧಿಕಾರಿಗಳು ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‍ಗೆ ಸಂಚರಿಸುವ ರೈಲಿನಲ್ಲಿ ಒಂದು ಎಸಿ ವಿಸ್ಟಾಡಮ್ ಕೋಚ್ ಅನ್ನು ಸೇರಿಸಲಿದ್ದಾರೆ. ಡಾರ್ಜಿಲಿಂಗ್‍ನಿಂದ ಘೂಮ್ ವಿಭಾಗದಲ್ಲಿ, ಎಲ್ಲಾ ಕೋಚ್‍ಗಳನ್ನು ಸಾಮಾನ್ಯ ಕೋಚ್‍ಗಳ ಬದಲಿಗೆ ವಿಸ್ಟಾಡಮ್ ಕೋಚ್‍ಗಳೊಂದಿಗೆ ಬದಲಾಯಿಸಲಾಗುತ್ತದೆ.

Comments

Leave a Reply

Your email address will not be published. Required fields are marked *