ಮಂಡ್ಯ: ಕಡೆ ಶ್ರಾವಣ ಶನಿವಾರ ಹಿನ್ನೆಲೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ದಿನ ಪೂರ್ತಿ ದೇವಾಲಯದ ಬಾಗಿಲು ತೆರೆಯಲು ನಿರ್ಧರಿಲಾಗಿದೆ.
ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 12.30 ರಿಂದ 4 ಗಂಟೆ ಮತ್ತು ಸಂಜೆ 6 ರಿಂದ 7 ಗಂಟೆ ವರೆಗೆ ದೇವಾಲಯದ ಬಾಗಿಲು ಹಾಕಲಾಗುತ್ತಿತ್ತು. ಅಂತಿಮವಾಗಿ ರಾತ್ರಿ 8:30 ಕ್ಕೆ ದೇವರ ದರ್ಶನ ಮುಗಿಯುತ್ತಿತ್ತು. ಆದರೆ ಇಂದು ಕಡೇ ಶ್ರಾವಣ ಶನಿವಾರವಾದ್ದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾತ್ರಿಯವರೆಗೂ ಭಕ್ತರು ಬರುತ್ತಲೇ ಇರುತ್ತಾರೆ.

ಹೀಗಾಗಿ ದೇಶದ ವಿವಿಧೆಡೆಯಿಂದ ಬರುವ ಚೆಲುವನಾರಾಯಣಸ್ವಾಮಿ ದೇವರ ಭಕ್ತರ ದರ್ಶನಕ್ಕೆ ಅನಾನುಕೂಲವಾಗದಂತೆ ದಿನಪೂರ್ತಿ ದೇವಾಲಯದ ಬಾಗಿಲು ತೆರೆದು ಪೂಜಾ ಕೈಂಕರ್ಯ ನಡೆಸಲು ನಿಶ್ಚಯಿಸಲಾಗಿದೆ. ಇನ್ನು ರಾತ್ರಿ 8:30 ರ ಬದಲಿಗೆ ರಾತ್ರಿ 9 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಒಂದು ವೇಳೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ರಾತ್ರಿ ಒಂಬತ್ತು ಗಂಟೆಯ ನಂತರವೂ ಚೆಲುವನಾರಾಯಣಸ್ವಾಮಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಿರುವುದರಿಂದ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply